ಬೆಂಗಳೂರು: ಹೊಸ ಶಾಲೆಯ ಆರಂಭ, ಮಾನ್ಯತೆ ಹಾಗೂ ಶಾಲೆಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆಯ ಹೊಸದಾಗಿ ಪ್ರತ್ಯೇಕ ಕರಡು ನಿಯಮಾವಳಿಗಳನ್ನು ರೂಪಿಸಿ ಶುಕ್ರವಾರ ಪ್ರಕಟಿಸಿದೆ.
ಇವುಗಳಿಗೆ ಆಕ್ಷೇಪಣೆಗಳನ್ನು ಅಪರ ಮುಖ್ಯ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಎಂಎಸ್ ಬಿಲ್ಡಿಂಗ್, ಬೆಂಗಳೂರು ಇವರಿಗೆ 15 ದಿನಗಳಲ್ಲಿ ಕಳುಹಿಸುವಂತೆ ಕೋರಲಾಗಿದೆ.
ಕರ್ನಾಟಕ ಶಿಕ್ಷಣ ಸಂಸ್ಥೆಗಳ(ವರ್ಗೀಕರಣ ನಿಯಂತ್ರಣ ಮತ್ತು ಪಠ್ಯಕ್ರಮ) ತಿದ್ದುಪಡಿ ನಿಯಮಗಳು 2026 ಕರಡು ನಿಯಮಾವಳಿಗಳಲ್ಲಿ ರಾಜ್ಯದಲ್ಲಿ ಹೊಸದಾಗಿ ಪೂರ್ವ ಪ್ರಾಥಮಿಕದಿಂದ ಪ್ರೌಢಶಾಲೆಗಳನ್ನು ಆರಂಭಿಸಲು ಬಯಸುವ ಖಾಸಗಿ ಸಂಸ್ಥೆಗಳು ಅಗತ್ಯ ಸ್ವಂತ ಭೂಮಿ ಅಥವಾ ಕನಿಷ್ಠ 15 ವರ್ಷಗಳಿಗೆ ನೋಂದಾಯಿತ ಗುತ್ತಿಗೆ ಭೂಮಿ ಹೊಂದಿರಬೇಕು. ಭೂ ಮಾಲೀಕತ್ವದ ಪುರಾವೆಯಾಗಿ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ಪಹಣಿ, ಇ-ಖಾತಾ ಅಥವಾ ಖಾತಾ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಶಾಲಾ ಆಡಳಿತ ಮಂಡಳಿ ಸ್ಥಳಾಂತರಕ್ಕೆ ಸಂಬಂಧಿಸಿದ ಕರ್ನಾಟಕ ಶಿಕ್ಷಣ ಸಂಸ್ಥೆಗಳ(ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ) ಬದಲಾವಣೆ ಅಥವಾ ಸ್ಥಳ ಬದಲಾವಣೆ ತಿದ್ದುಪಡಿ ನಿಯಮ 2026 ಕರಡು ನಿಯಮಾವಳಿಯಲ್ಲಿ ಹಾಲಿ ಶಾಲೆಗಳ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದರೆ ಸುಸ್ಥಿತಿಯಲ್ಲಿರುವ ಸ್ವಂತ, ಬಾಡಿಗೆ ಅಥವಾ ಲೀಸ್ ಜಾಗ ಕಟ್ಟಡಕ್ಕೆ ಸ್ಥಳಾಂತರಿಸಲು ಒಮ್ಮೆ ಅವಕಾಶ ನೀಡಲಾಗುವುದು.
ಶಾಲೆಗಳು ಮಾನ್ಯತೆಗಾಗಿ ಸಲ್ಲಿಸುವ ಪ್ರತಿಯೊಂದು ಅರ್ಜಿಯೊಂದಿಗೆ ಇನ್ನು ಮುಂದೆ ಕಡ್ಡಾಯವಾಗಿ ಇ- ಬ್ಯಾಂಕ್ ಗ್ಯಾರಂಟಿ ರೂಪದಲ್ಲಿ ಭದ್ರತಾ ಠೇವಣಿ ಸಲ್ಲಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

