ಸಾಮಾನ್ಯವಾಗಿ ಮನೆ ಖರೀದಿಸುವಾಗ ಅಥವಾ ಕಟ್ಟುವಾಗ ದಕ್ಷಿಣ ದಿಕ್ಕು ಎಂದರೆ ಸಾಕು, ಅನೇಕರು ಬೆಚ್ಚಿಬೀಳುತ್ತಾರೆ ಅಯ್ಯೋ ಅದು ಯಮನ ದಿಕ್ಕು, ಮೃತ್ಯು ಭಯ ಇರುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕು ಕೇವಲ ಅಶುಭವಲ್ಲ; ಇದು ಧೈರ್ಯ, ಸ್ಥಿರತೆ ಮತ್ತು ಸಮೃದ್ಧಿಯ ಸಂಕೇತವೂ ಹೌದು. ದಕ್ಷಿಣ ಭಾರತದ ಹೆಮ್ಮೆಯ ತಿರುಪತಿ ವೆಂಕಟೇಶ್ವರ ದೇವಸ್ಥಾನವೇ ಇದಕ್ಕೆ ದೊಡ್ಡ ಸಾಕ್ಷಿ.
ದಕ್ಷಿಣ ದಿಕ್ಕಿನ ವಾಸ್ತು ರಹಸ್ಯಗಳು: ವಾಸ್ತು ಪ್ರಕಾರ ದಕ್ಷಿಣ ದಿಕ್ಕು ಭೂ ತತ್ವಕ್ಕೆ ಸಂಬಂಧಿಸಿದ್ದು. ಈ ದಿಕ್ಕಿನ ಮನೆಯ ಯಜಮಾನ ಧೈರ್ಯವಂತನಾಗಿರುತ್ತಾನೆ. ಆದರೆ, ಇಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಅತಿ ಮುಖ್ಯ:
ತೂಕದ ಗೋಡೆ ಇರಲಿ: ಮನೆ ಕಟ್ಟುವಾಗ ದಕ್ಷಿಣ ಭಾಗವನ್ನು ಮೊದಲು ಮುಚ್ಚಬೇಕು. ಇಲ್ಲಿ ದಪ್ಪನೆಯ ಗೋಡೆ ಅಥವಾ ಭಾರವಾದ ವಸ್ತುಗಳನ್ನು ಇರಿಸುವುದು ಶುಭ.
ಖಾಲಿ ಜಾಗ ಬಿಡಬೇಡಿ: ದಕ್ಷಿಣದಲ್ಲಿ ಹೆಚ್ಚು ಖಾಲಿ ಜಾಗವಿದ್ದರೆ ಧನಹಾನಿ ಮತ್ತು ಸ್ತ್ರೀಯರಲ್ಲಿ ಅಶಾಂತಿ ಉಂಟಾಗಬಹುದು.
ಪುಸ್ತಕಗಳನ್ನಿಡಬೇಡಿ: ದಕ್ಷಿಣ ಭಾಗದಲ್ಲಿ ಪುಸ್ತಕಗಳನ್ನು ಇರಿಸಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗುವ ಸಾಧ್ಯತೆ ಇರುತ್ತದೆ.
ದೋಷಗಳು ಮತ್ತು ಎಚ್ಚರಿಕೆಗಳು:
ದಕ್ಷಿಣದ ಬಾಗಿಲು ಆಗ್ನೇಯ ಕೋನದಲ್ಲಿದ್ದರೆ ಕಳ್ಳತನ ಅಥವಾ ಕೋರ್ಟ್ ವ್ಯಾಜ್ಯಗಳ ಭಯವಿರುತ್ತದೆ.
ಬಾಗಿಲಿನ ಎದುರು ತಗ್ಗು ಅಥವಾ ಕತ್ತಲೆ ಇರಬಾರದು; ಇದು ಸಹೋದರರ ಅಭಿವೃದ್ಧಿಗೆ ಮಾರಕ.
ದಕ್ಷಿಣದಲ್ಲಿ ಬಾವಿ ಅಥವಾ ಹಳ್ಳ ಇದ್ದರೆ ಅದು ದುರ್ಘಟನೆಯ ಸಂಕೇತ. ಆದರೆ, ಈ ಭಾಗ ಸ್ನಾನದ ಕೋಣೆಗೆ (Bathroom) ಹೆಚ್ಚು ಸೂಕ್ತವಾಗಿದೆ.
ಉತ್ತಮ ನಿದ್ರೆಗಾಗಿ ಈ ಟಿಪ್ಸ್ ಬಳಸಿ: ವಿದ್ಯಾರ್ಥಿಗಳು ಮತ್ತು ಮನೆಯ ಯಜಮಾನರು ಯಾವಾಗಲೂ ದಕ್ಷಿಣ ಅಥವಾ ಪಶ್ಚಿಮಕ್ಕೆ ತಲೆಮಾಡಿ ಮಲಗಬೇಕು. ಇದರಿಂದ ಮನಸ್ಸಿಗೆ ಶಾಂತಿ ಮತ್ತು ಸುಖ ನಿದ್ರೆ ಲಭಿಸುತ್ತದೆ. ಗಿಡಮರಗಳನ್ನು ಬೆಳೆಸಲು ಕೂಡ ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳೇ ಬೆಸ್ಟ್.
ದೋಷವಿದ್ದರೆ ಸರಳ ಪರಿಹಾರಗಳು: ಒಂದು ವೇಳೆ ನಿಮ್ಮ ಮನೆ ದಕ್ಷಿಣಾಭಿಮುಖವಾಗಿದ್ದು ದೋಷದ ಭಯವಿದ್ದರೆ ಚಿಂತಿಸಬೇಡಿ, ಈ ಸರಳ ದಾರಿಗಳಿವೆ:
- ಮನೆಯ ಮುಖ್ಯ ದ್ವಾರಕ್ಕೆ ಗಣಪತಿಯ ಫೋಟೋ ಅಥವಾ ಮಂಗಳ ಯಂತ್ರವನ್ನು ಅಂಟಿಸಿ.
- ನಿತ್ಯವೂ ಹನುಮಾನ್ ಚಾಲೀಸಾ ಪಠಿಸಿ ಅಥವಾ ಕಾಲಭೈರವನ ಆರಾಧನೆ ಮಾಡಿ.
- ಮನೆಯ ಯಜಮಾನರು ಮಂಗಳವಾರ ವ್ರತ ಮಾಡುವುದು ವಿಶೇಷ ಫಲ ನೀಡುತ್ತದೆ.

