HomeKarnatakaಪಿಜಿ ವೈದ್ಯಕೀಯ ಕೋರ್ಸ್ ಮೊದಲ ಸುತ್ತಿನ ಸೀಟು ಹಂಚಿಕೆ: ಆಯ್ಕೆ ದಾಖಲಿಸಲು ನ. 2ರಂದು ಸಂಜೆ...

ಪಿಜಿ ವೈದ್ಯಕೀಯ ಕೋರ್ಸ್ ಮೊದಲ ಸುತ್ತಿನ ಸೀಟು ಹಂಚಿಕೆ: ಆಯ್ಕೆ ದಾಖಲಿಸಲು ನ. 2ರಂದು ಸಂಜೆ 4 ಗಂಟೆವರೆಗೆ ಅವಕಾಶ

ಬೆಂಗಳೂರು: PG Medical-26: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭಿಸಿದ್ದು, ಇಚ್ಛೆ/ಆಯ್ಕೆಗಳನ್ನು (Options) ದಾಖಲಿಸಲು ನವೆಂಬರ್ 2ರಂದು ಸಂಜೆ 4 ಗಂಟೆವರೆಗೆ ಅವಕಾಶ ನೀಡಲಾಗಿದೆ.

ನವೆಂಬರ್ 3ರಂದು ಸಂಜೆ 4ಕ್ಕೆ ಅಣಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ.

ಬಳಿಕ ನ.3ರಂದು ಸಂಜೆ 5ರಿಂದ ನ.5ರ ಬೆಳಿಗ್ಗೆ 10ಗಂಟೆವರೆಗೆ ಆಪ್ಷನ್ಸ್ ಬದಲಿಸಿಕೊಳ್ಳಲು, ಹೊಸದಾಗಿ ಸೇರಿಸಲು, ಅಳಿಸಲು ಸಮಯ ನಿಗದಿಪಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನ.5ರಂದು ಸಂಜೆ 8 ಗಂಟೆಗೆ ತಾತ್ಕಾಲಿಕ ಫಲಿತಾಂಶ ಹಾಗೂ  ನ.6ರಂದು ಬೆಳಿಗ್ಗೆ 11 ಗಂಟೆಗೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.

ಮೊದಲ ಸುತ್ತಿಗೆ ದಾಖಲಿಸಿರುವ ಆಪ್ಷನ್ಸ್ ಎರಡನೇ ಸುತ್ತಿಗೂ ಇರುತ್ತವೆ. ಹೀಗಾಗಿ ಎಚ್ಚರಿಕೆಯಿಂದ ಆಪ್ಷನ್ಸ್ ದಾಖಲಿಸಿ. ಎರಡನೇ ಸುತ್ತಿನಲ್ಲಿ ಹೊಸದಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ನ.2ರವರೆಗೆ ಆಯ್ಕೆ ದಾಖಲಿಸಲು ಅವಕಾಶ

ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ 2026ನೇ ಸಾಲಿನ ವೈದ್ಯಕೀಯ ಸ್ನಾತಕೋತ್ತರ (PG Medical) ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೊದಲ ಸುತ್ತಿನ ಆನ್‌ಲೈನ್ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಆರಂಭಿಸಿದೆ. ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಗೆ ಕಾಲೇಜು ಮತ್ತು ಕೋರ್ಸ್‌ಗಳ ಆಯ್ಕೆ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಕ್ಟೋಬರ್ 30, 2026ರಂದು ಅಧಿಕೃತ ಪ್ರಕಟಣೆ ಹೊರಡಿಸಿದೆ. ಮೊದಲ ಸುತ್ತಿನ ಆನ್‌ಲೈನ್ ಸೀಟು ಹಂಚಿಕೆ ಪ್ರಕ್ರಿಯೆಯು ಸೇವೆಯಲ್ಲಿಲ್ಲದ (Non-Inservice) ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ.

ನ.2ರ ಸಂಜೆ 4 ಗಂಟೆಯವರೆಗೆ ಅವಕಾಶ

ಅಭ್ಯರ್ಥಿಗಳು ತಮ್ಮ ಕಾಲೇಜು ಮತ್ತು ಕೋರ್ಸ್‌ಗಳ ಆದ್ಯತೆಯ ಆಯ್ಕೆಗಳನ್ನು ಅಕ್ಟೋಬರ್ 30ರ ರಾತ್ರಿ 8 ಗಂಟೆಯಿಂದ ನವೆಂಬರ್ 2ರ ಸಂಜೆ 4 ಗಂಟೆಯವರೆಗೆ ದಾಖಲಿಸಬಹುದಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು 2026ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಸೀಟು ಮ್ಯಾಟ್ರಿಕ್ಸ್‌ ಅನ್ನು ಪ್ರಕಟಿಸಿದ್ದು, ಅದನ್ನು ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಲಭ್ಯವಾಗುವಂತೆ ಮಾಡಲಾಗಿದೆ.

ಸೀಟು ಮ್ಯಾಟ್ರಿಕ್ಸ್‌ ಪ್ರಕಟವಾದ ಹಿನ್ನೆಲೆಯಲ್ಲಿ ಕೆಇಎ ಆಯ್ಕೆ ದಾಖಲಿಸುವ (Option Entry) ಪೋರ್ಟಲ್‌ ಅನ್ನು ಸಕ್ರಿಯಗೊಳಿಸಿದೆ.

ಆಯ್ಕೆ ದಾಖಲಿಸುವ ಮುನ್ನ ಪರಿಶೀಲನೆ ಕಡ್ಡಾಯ

ಅಭ್ಯರ್ಥಿಗಳು ತಮಗೆ ಲಭ್ಯವಿರುವ ಕಾಲೇಜುಗಳು ಮತ್ತು ಕೋರ್ಸ್‌ಗಳ ಆಯ್ಕೆಯನ್ನು ದಾಖಲಿಸುವ ಮೊದಲು ಕೆಲವು ಪ್ರಮುಖ ಅಂಶಗಳನ್ನು ಪರಿಶೀಲಿಸುವಂತೆ ಕೆಇಎ ಸೂಚಿಸಿದೆ.

* ಪ್ರತಿ ಕೋರ್ಸ್‌ನ ಶುಲ್ಕದ ವಿವರ.

* ಸೀಟುಗಳ ವರ್ಗ ಮತ್ತು ವಿಧ.

* ವೈದ್ಯಕೀಯ ಕಾಲೇಜು ಇರುವ ಸ್ಥಳ.

* ಕೋರ್ಸ್‌ಗಳಿಗೆ ಸಂಬಂಧಿಸಿದ ಇತರ ನಿಯಮಗಳು ಮತ್ತು ಷರತ್ತುಗಳು.

ಈ ಎಲ್ಲ ವಿವರಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡ ನಂತರವೇ ಅಭ್ಯರ್ಥಿಗಳು ತಮ್ಮ ಆಯ್ಕೆಗಳನ್ನು ದಾಖಲಿಸಬೇಕು ಎಂದು ಪ್ರಾಧಿಕಾರ ಸಲಹೆ ನೀಡಿದೆ.

ಎರಡನೇ ಸುತ್ತಿನಲ್ಲಿ ಮತ್ತೆ ಆಯ್ಕೆ ದಾಖಲಿಸಲು ಅವಕಾಶವಿಲ್ಲ!

ಕೆಇಎ ಪ್ರಕಟಣೆಯಲ್ಲಿನ ಅತ್ಯಂತ ಪ್ರಮುಖ ಅಂಶವೆಂದರೆ, ಮೊದಲ ಸುತ್ತಿನಲ್ಲಿ ಅಭ್ಯರ್ಥಿಗಳು ದಾಖಲಿಸಿರುವ ಆಯ್ಕೆಗಳ ಆದ್ಯತೆಯ ಕ್ರಮವು ಎರಡನೇ ಸುತ್ತಿನ ಆನ್‌ಲೈನ್ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿಯೂ ಹಾಗೆಯೇ ಮುಂದುವರಿಯಲಿದೆ.

ಅಂದರೆ, ಮೊದಲ ಸುತ್ತಿನಲ್ಲಿ ದಾಖಲಿಸಿದ ಆಯ್ಕೆಗಳ ಆದ್ಯತೆಯನ್ನು ಎರಡನೇ ಸುತ್ತಿಗೆ ಬದಲಾಯಿಸಲು ಅಥವಾ ಹೊಸದಾಗಿ ಆಯ್ಕೆಗಳನ್ನು ದಾಖಲಿಸಲು ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳು ಮೊದಲ ಸುತ್ತಿನಲ್ಲಿಯೇ ತಮ್ಮ ಆಯ್ಕೆಗಳನ್ನು ಬಹಳ ಎಚ್ಚರಿಕೆಯಿಂದ ದಾಖಲಿಸಬೇಕು ಎಂದು ಕೆಇಎ ಸ್ಪಷ್ಟಪಡಿಸಿದೆ.

ಪ್ರವೇಶ ನಿಯಮಗಳ ಪಾಲನೆ ಕಡ್ಡಾಯ

ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ಕಾಲೇಜು ಪ್ರವೇಶ ಮತ್ತು ಸೀಟು ಹಂಚಿಕೆ ಪ್ರಕ್ರಿಯೆಯು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC), ರಾಜ್ಯ ಸರ್ಕಾರ, ಸಂಬಂಧಪಟ್ಟ ವಿಶ್ವವಿದ್ಯಾಲಯಗಳು ಹಾಗೂ ಇತರ ಸಕ್ಷಮ ಪ್ರಾಧಿಕಾರಗಳು ಕಾಲಕಾಲಕ್ಕೆ ನಿಗದಿಪಡಿಸುವ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ನಿಗದಿಪಡಿಸಿರುವ ಅರ್ಹತಾ ಮಾನದಂಡಗಳನ್ನು ಪೂರೈಸದ ಅಭ್ಯರ್ಥಿಗಳಿಗೆ ನೀಡಿರುವ ಪ್ರವೇಶವನ್ನು ಯಾವುದೇ ಹಂತದಲ್ಲಿ ಹಿಂಪಡೆಯುವ ಅಧಿಕಾರ ಕೆಇಎಗೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿಗಳು ಸೀಟು ಹಂಚಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಮುಂದಿನ ಪ್ರಕಟಣೆಗಳು, ವೇಳಾಪಟ್ಟಿ ಹಾಗೂ ಇತರ ಮಾಹಿತಿಗಾಗಿ ಕೆಇಎ ಅಧಿಕೃತ ವೆಬ್‌ಸೈಟ್‌ಗೆ ನಿಯಮಿತವಾಗಿ ಭೇಟಿ ನೀಡುವಂತೆ ಸೂಚಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular