ಬೆಂಗಳೂರು: ಕಾಂಕ್ರೀಟ್ ಕೆಲಸ ಮಾಡುವಾಗ ಆಯತಪ್ಪಿ ರಾಜಕಾಲುವೆಯ ಚರಂದಿಗೆ ಬಿದ್ದ ಕಾರ್ಮಿಕನೊಬ್ಬ ಮೂರು ದಿನಗಳ ಬಳಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ವೈಟ್ಫೀಲ್ಡ್ನ ಮಣಿಪಾಲ್ ಆಸ್ಪತ್ರೆಯ ಬಳಿ ಕಾಂಕ್ರೀಟ್ ಕೆಲಸ ನಡೆಯುತ್ತಿದ್ದಾಗ, ತಮಿಳುನಾಡಿನ 32 ವರ್ಷದ ಕಾರ್ಮಿಕನೊಬ್ಬ ಎಂಟು ಅಡಿ ಎತ್ತರದ ತಡೆಗೋಡೆಯಿಂದ ರಾಜಕಾಲುವೆಗೆ (ಚರಂಡಿ) ಬಿದ್ದು ಮೃತಪಟ್ಟಿದ್ದಾರೆ.
ಘಟನೆ ನಡೆದ ಮೂರು ದಿನಗಳ ನಂತರ, ಅಂದರೆ ಮಂಗಳವಾರದಂದು ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟರು. ಮೃತಪಟ್ಟ ವ್ಯಕ್ತಿಯನ್ನು ತಮಿಳುನಾಡಿನ ತಿರುಪುರದ ನಿವಾಸಿ ಎಂ. ಮಂಜುನಾಥ್ ಎಂದು ಗುರುತಿಸಲಾಗಿದೆ. ಅವರ ತಾಯಿ ಸೆಲ್ವಿ (57) ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಂಜುನಾಥ್ ಮತ್ತು ಅವರ ಸಹೋದ್ಯೋಗಿ ಚುಡಪ್ಪ ಅವರು ಲಾರಿಗೆ ಅಳವಡಿಸಲಾದ ಕಾಂಕ್ರೀಟ್ ಪಂಪ್ ಬಳಸಿ ಕಾಂಕ್ರೀಟ್ ಸುರಿಯುತ್ತಿದ್ದಾಗ ಮಧ್ಯಾಹ್ನ 2.35ರ ಸುಮಾರಿಗೆ ಈ ಅವಘಡ ಸಂಭವಿಸಿದೆ.
ಪಂಪ್ನಲ್ಲಿ ಇದ್ದಕ್ಕಿದ್ದಂತೆ ಒತ್ತಡ ಹೆಚ್ಚಾದ ಪರಿಣಾಮ, ಇಬ್ಬರೂ ಕಾರ್ಮಿಕರು ಗೋಡೆಯ ಮೇಲಿಂದ ಚರಂಡಿಗೆ ಬಿದ್ದಿದ್ದಾರೆ. ಈ ವೇಳೆ ಚುಡಪ್ಪ ಅವರ ಬಲ ಭುಜಕ್ಕೆ ಗಾಯವಾಗಿದ್ದರೆ, ಮಂಜುನಾಥ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು.
ಸುಮಾರು 15 ದಿನಗಳ ಹಿಂದಷ್ಟೇ ಮಂಜುನಾಥ್ ಬೆಂಗಳೂರಿಗೆ ಬಂದಿದ್ದರು. ದುಡಿಯುವ ಉದ್ದೇಶಕ್ಕಾಗಿ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿ ಇದೀಗ ದುರಂತ ಅಂತ್ಯಕಂಡಿದ್ದಾರೆ.
ನಿರ್ಮಾಣ ಸ್ಥಳದಲ್ಲಿ ನಿರ್ಲಕ್ಷ್ಯ ಮತ್ತು ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಈ ಘಟನೆ ಸಂಭವಿಸಿದೆ. ಪ್ರಕರಣದಲ್ಲಿ ಐವರ ವಿರುದ್ಧ ದೂರು ದಾಖಲಿಸಲಾಗಿದ್ದು, ಅವರಿಗೆ ನೋಟಿಸ್ಗಳನ್ನು ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವೈಟ್ಫೀಲ್ಡ್ ಪೊಲೀಸರು ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.

