ಬಂಗಾಳಿ ಚಿತ್ರರಂಗದ ಖ್ಯಾತ ನಟಿ ಸೌರಸೇನಿ ಮೈತ್ರ ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದವರು. ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು, ಇಂದು ಬಂಗಾಳಿ ಸಿನಿಮಾರಂಗದ ಪ್ರಮುಖ ನಟಿಯಾಗಿ ಬೆಳೆದು ನಿಂತಿದ್ದಾರೆ. ಇದೀಗ ಅವರು ಅಭಿನಯಿಸಿರುವ ನೂತನ ‘ನಿಬ್ಬಾ ನಿಬ್ಬಿ’ ಸಿನಿಮಾದ ಟ್ರೇಲರ್ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ್ದು, ಸೌರಸೇನಿ ಅವರ ವಿಭಿನ್ನ ಅವತಾರ ಕಂಡು ಚಿತ್ರಪ್ರೇಮಿಗಳು ಆಶ್ಚರ್ಯಚಕಿತರಾಗಿದ್ದಾರೆ.
ತಥಾಗತ ಮುಖರ್ಜಿ ನಿರ್ದೇಶನದ ಈ ಡಾರ್ಕ್ ಕಾಮಿಡಿ ಹಾಗೂ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಸೌರಸೇನಿ ‘ಪಾರೋ’ ಎಂಬ ಗರ್ಭಿಣಿ ಮಹಿಳೆಯ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸದಾಕಾಲದ ಸಾಂಪ್ರದಾಯಿಕ ಹಾಗೂ ಗ್ಲಾಮರಸ್ ಪಾತ್ರಗಳಿಂದ ಹೊರಬಂದು, ಈ ಚಿತ್ರದಲ್ಲಿ ಪೂರ್ಣಪ್ರಮಾಣದ ಆಕ್ಷನ್ ಅವತಾರ ತಾಳಿದ್ದಾರೆ. ಕೈಯಲ್ಲಿ ಗನ್ ಹಿಡಿದು, ರಕ್ತಸಿಕ್ತ ಉಡುಪಿನಲ್ಲಿ ಹೈ-ವೋಲ್ಟೇಜ್ ಸಾಹಸ ದೃಶ್ಯಗಳಲ್ಲಿ ನಟಿಸಿರುವ ಅವರ ಶೈಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಈ ಪಾತ್ರದ ಕುರಿತು ಮಾತನಾಡಿರುವ ನಟಿ, ಸಾಧಾರಣವಾಗಿ ಸಿನಿಮಾಗಳಲ್ಲಿ ಗರ್ಭಿಣಿಯರನ್ನು ಅತ್ಯಂತ ಸೂಕ್ಷ್ಮವಾಗಿ ತೋರಿಸಲಾಗುತ್ತದೆ. ಆದರೆ ಈ ಚಿತ್ರದಲ್ಲಿ ‘ಪಾರೋ’ ಪಾತ್ರವು ಅತ್ಯಂತ ಧೈರ್ಯಶಾಲಿ ಮತ್ತು ತನಗೆ ಬೇಕಾದಂತೆ ಬದುಕುವ ನಾರಿಯಾಗಿದೆ. ಈ ಪಾತ್ರಕ್ಕಾಗಿ ಸುಮಾರು ಮೂರು ಕೆಜಿ ತೂಕದ ಪ್ರೊಸ್ಟೆಟಿಕ್ ಧರಿಸಿ ದಿನನಿತ್ಯ ಅಭ್ಯಾಸ ಮಾಡಿದ್ದಾಗಿ ಅವರು ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ನಟ ರಿಷಭ್ ಬಸು ಜೊತೆಗಿನ ನಟಿಯ ಕೆಮಿಸ್ಟ್ರಿ ಮತ್ತು ಚಿತ್ರದ ರೋಮಾಂಚಕ ಕಥಾಹಂದರ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಪುರುಷ ನಿರ್ದೇಶಕರು ಹೆಣ್ಣಿನ ಶಕ್ತಿಯನ್ನು ವಿಭಿನ್ನವಾಗಿ ತೆರೆಯ ಮೇಲೆ ತಂದಿದ್ದು, ಸಮಾಜದ ಅನೇಕ ಕಲ್ಪನೆಗಳನ್ನು ಈ ಸಿನಿಮಾ ಮುರಿಯಲಿದೆ ಎಂದು ಅವರು ಹೇಳಿದ್ದಾರೆ. ‘ನಿಬ್ಬಾ ನಿಬ್ಬಿ’ ಸಿನಿಮಾ ಜೀ5 ಬಂಗಾಳಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗುತ್ತಿದೆ.

