ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಹಗರಣ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP)ನಡೆಸುತ್ತಿದ್ದ ಪ್ರತಿಭಟನೆ ಬೆಂಬಲಿಸಿ ದೆಹಲಿಯ ಜಂತರ್-ಮಂತರ್ ನಲ್ಲಿ 26 ದಿನಗಳ ನಿರಂತರ ಉಪವಾಸ ಸತ್ಯಾಗ್ರಹವನ್ನು ನಡೆಸಿ ಕೇಂದ್ರ ಸರ್ಕಾರದ ಮನವೊಲಿಕೆ ಬಳಿಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿರುವ ಲಡಾಖ್‌ನ ಖ್ಯಾತ ಪರಿಸರ ಮತ್ತು ಶಿಕ್ಷಣ ಹೋರಾಟಗಾರ ಸೋನಮ್ ವಾಂಗ್ಚುಕ್ ವಿರುದ್ಧ ಇದೀಗ ಟೀಕೆಗಳು ವ್ಯಕ್ತವಾಗುತ್ತಿವೆ. ಸೋಷಿಯಲ್ ಮೀಡಿಯಾಗಳಲ್ಲಿ ಅವರು ಡೀಲ್ ಮಾಡಿಕೊಂಡು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ. ಈ ಟೀಕೆ, ಆರೋಪಗಳಿಗೆ ಸೋನಮ್ ವಾಂಗ್ಚುಕ್ ಆಸ್ಪತ್ರೆಯ ಬೆಡ್ ಮೇಲಿಂದಲೇ ಖಡಕ್ ಉತ್ತರ ನೀಡಿದ್ದಾರೆ.
26 ದಿನಗಲ ಕಾಲ ಸುದೀರ್ಘ ಉಪವಾಸ ಸತ್ಯಾಗ್ರಹ ನಡೆಸಿದ್ದ ಸೋನಮ್ ವಾಂಗ್ಚುಕ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಕೇಂದ್ರ ಸರ್ಕಾರದ ಮನವೋಲಿಕೆ ಬಳಿಕ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಸಮಸ್ಯೆ ಆಲಿಸುವುದಾಗಿ ಭರವಸೆ ನೀಡಿದ ಬಳಿಕ ಸೋನಮ್ ವಾಂಗ್ಚುಕ್ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದರು. ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಕ್ಕೆ ಇದೀಗ ಕೆಲವರು ಟೀಕಿಸಿದ್ದಾರೆ.
ಇದಕ್ಕೆ ಸ್ವತಃ ಸೋನಮ್ ವಾಂಗ್ಚುಕ್ ಆಸ್ಪತ್ರೆ ಬೆಡ್ ಮೇಲಿಂದಲೇ ಉತ್ತರಿಸಿದ್ದಾರೆ. ದೆಹಲಿಯ ಜಂತರ್ ಮಂತರ್‌ನಿಂದ ಆಸ್ಪತ್ರೆಯ ಐಸಿಯು ವಾರ್ಡ್‌ಗೆ ದಾಖಲಾಗಿದ್ದ ನಾನು 26 ದಿನಗಳ ಸುದೀರ್ಘ ಹಸಿವಿನ ನಂತರವೂ ನಾನು ನನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಬೇಕೇ? ಎಂದು ಪ್ರಶ್ನಿಸಿದ್ದಾರೆ.
ಆಸ್ಪತ್ರೆಯ ಹಾಸಿಗೆಯಿಂದಲೇ ರೆಕಾರ್ಡ್ ಮಾಡಿದ 22 ನಿಮಿಷಗಳ ವೀಡಿಯೊದಲ್ಲಿ ಮಾತನಾಡಿದ ಅವರು “ಸ್ವಲ್ಪ ಬೇಸರ, ಆಶ್ಚರ್ಯ ಹಾಗೂ ಕೋಪದಿಂದ ಈ ವೀಡಿಯೊ ಮಾಡುತ್ತಿದ್ದೇನೆ. 26 ದಿನಗಳ ಹಸಿವಿನಿಂದಾಗಿ ನನ್ನ ದೇಹದ ಸ್ನಾಯುಗಳು ಕ್ಷೀಣಿಸಿವೆ, ಸುಮಾರು 11 ಕೆಜಿ ತೂಕ ಕಡಿಮೆಯಾಗಿದೆ ಮತ್ತು ಅಂಗಾಂಗಗಳಿಗೆ ತೀವ್ರ ಹಾನಿಯಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಕೇಂದ್ರ ಸಚಿವರಾದ ಜೇಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಉಪಸ್ಥಿತಿಯಲ್ಲಿ ಉಪವಾಸ ಮುರಿದಿದ್ದಕ್ಕೆ ಎದ್ದಿರುವ ಟೀಕೆಗಳಿಗೆ ಉತ್ತರಿಸಿದ ಅವರು, “ಸರ್ಕಾರದೊಂದಿಗೆ ಡೀಲ್ ಮಾಡಿಕೊಳ್ಳಲು ಯಾರಾದರೂ 26 ದಿನ ಹಸಿವಿನಿಂದ ಬಳಲುತ್ತಾರೆಯೇ? ಡೀಲ್ ಮಾಡಿಕೊಳ್ಳುವುದಿದ್ದರೆ ದೆಹಲಿಯ ಭಾರಿ ಬಿಸಿಲಿನಲ್ಲಿ ರಸ್ತೆಯಲ್ಲಿ ಕೂರುವ ಬದಲು ಏಸಿ ಕೊಠಡಿಯಲ್ಲಿ ಕುಳಿತು ಮಾಡಬಹುದಿತ್ತಲ್ಲವೇ?” ಎಂದು ತಿರುಗೇಟು ನೀಡಿದ್ದಾರೆ.
ಇನ್ನು ವಾಂಗ್ಚುಕ್ ಅವರು ಉಪವಾಸ ಹಿಂಪಡೆದಿರುವುದನ್ನು ಸಿಜೆಪಿ (CJP) ವಕ್ತಾರ ಅಶುತೋಷ್ ರಂಕಾ ಸ್ವಾಗತಿಸಿದ್ದಾರೆ. ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದ ಕಾರಣ ನಾವೇ ಉಪವಾಸ ಹಿಂಪಡೆಯಲು ವಿನಂತಿಸುತ್ತಿದ್ದೆವು. ಅವರು ಉಪವಾಸ ಅಂತ್ಯಗೊಳಿಸಿರುವುದು ಸಂತಸ ತಂದಿದೆ, ಆದರೆ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದಿದ್ದಾರೆ.

