ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆದ್ದಾರಿ, ರಾಜ್ಯ ಮುಖ್ಯ ರಸ್ತೆಯ ಪಕ್ಕದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವ ಗ್ರಾನೈಟ್, ಮಾರ್ಬಲ್ ಮಾರಾಟದ ತಾತ್ಕಾಲಿಕ ಮಳಿಗೆಗಳು, ಡಾಬಾಗಳು, ಹೋಟೆಲ್ ಮತ್ತಿತರ ವಾಣಿಜ್ಯ ಚಟುವಟಿಕೆ ನಡೆಸುವ ತಾತ್ಕಾಲಿಕ ಮಳಿಗೆಗಳು, ಜಾಹೀರಾತು ಫಲಕಗಳಿಗೆ ನಿಯಮಾನಸಾರ ಶುಲ್ಕ ತೆರಿಗೆ ವಿಧಿಸಲು ಸಮಿತಿ ರಚಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಪಕ್ಕದಲ್ಲಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿ ಹೋಟೆಲ್, ಡಾಬಾ, ಮಾರ್ಬಲ್, ಗ್ರಾನೈಟ್ ಮತ್ತಿತರ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇಂತಹ ವ್ಯಾಪಾರಿಗಳು ತೆರಿಗೆ ನೀಡುತ್ತಿಲ್ಲ. ಪಂಚಾಯಿತಿಗಳಿಗೆ ಸೂಕ್ತ ಆದಾಯವೂ ಬರುತ್ತಿಲ್ಲ. ಹೀಗಾಗಿ ಶುಲ್ಕ ವಿಧಿಸುವ ಬಗ್ಗೆ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ವಾಣಿಜ್ಯ ವಹಿವಾಟು ನಡೆಯುವ ಎಲ್ಲಾ ಪ್ರದೇಶ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಆಗಿರುವುದಿಲ್ಲ. ಹೀಗಾಗಿ ಸಮಿತಿ ರಚಿಸಿ ವರದಿ ಪಡೆದುಕೊಂಡ ನಂತರ ಶುಲ್ಕ ವಿಧಿಸಲು ನಿಯಮ ರೂಪಿಸಲಾಗುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯಕಟ್ಟಿನ ಜಾಗಗಳಲ್ಲಿ ಬೃಹತ್ ಫಲಕಗಳನ್ನು ಹಾಕಿ ಜಾಹೀರಾತು ಪ್ರದರ್ಶಿಸಲಾಗುತ್ತದೆ. ಇಂತಹ ಜಾಹೀರಾತು ಫಲಕಗಳಿಗೂ ಶುಲ್ಕ ತೆರಿಗೆ ವಿಧಿಸಲಾಗುವುದು. ತೆರಿಗೆ ನಿರ್ಧರಿಸಲು ಸಮಿತಿ ರಚಿಸಲಾಗುವುದು ಎಂದು ತಿಳಿಸಿದ್ದಾರೆ.

