HomeLatest Newsಕೊಲೆ ಅಪರಾಧಿಗೆ ದಂಡ ಸಹಿತ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಪ್ರಕಟ

ಕೊಲೆ ಅಪರಾಧಿಗೆ ದಂಡ ಸಹಿತ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಪ್ರಕಟ

ಕೊಪ್ಪಳ: ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಕನೂರು ತಾಲ್ಲೂಕಿನ ಬೆಣಕಲ್ ಗ್ರಾಮದ ನಿವಾಸಿ ದೇವೇಂದ್ರಪ್ಪ ಮಲ್ಲಪ್ಪ ಬಡಿಗೇರ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಅದೇ ಗ್ರಾಮದ ನಿವಾಸಿ ಆರೋಪಿ ಶರಣಪ್ಪ ಯಲ್ಲಪ್ಪ ಕರಿಗಾರ ಇವರ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ.15,000 ದಂಡವನ್ನು ವಿಧಿಸಿ ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಸಿ. ಅವರು ಜುಲೈ 22 ರಂದು ತೀರ್ಪು ಪ್ರಕಟಿಸಿದ್ದಾರೆ.

ಕೊಲೆಯಾದ ದೇವೇಂದ್ರಪ್ಪ ಮಲ್ಲಪ್ಪ ಬಡಿಗೇರ ಅವರು ಕೊಲೆಯಾಗುವ ಒಂದು ತಿಂಗಳು ಮುಂಚೆ ಆರೋಪಿ ಶರಣಪ್ಪ ಯಲ್ಲಪ್ಪ ಕರಿಗಾರ ಅವರು ದೇವೇಂದ್ರಪ್ಪ ಅವರು ತಮ್ಮ ಮನೆಯ ಮುಂದೆ ತಮ್ಮ ಕುಲಕಸುಬಾದ ಬಡಿಗೆತನ ಮಾಡುತ್ತಿರುವಾಗ ಅವರ ಹತ್ತಿರ ಹೋಗಿ ನೀವು ಇಲ್ಲಿ ಕೆಲಸ ಮಾಡಬಾರದು ಎಂದು ಜಗಳವಾಡಿ ಇಲ್ಲಿ ಕೆಲಸ ಮಾಡಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು.

2020 ರ ಅಕ್ಟೋಬರ್ 18 ರಂದು ಸಂಜೆ 5 ಗಂಟೆ ಸುಮಾರಿಗೆ ಬೆಣಕಲ್ ಗ್ರಾಮದ ಚೆನ್ನಮ್ಮ ಸರ್ಕಲ್ ಹತ್ತಿರ ಗ್ರಾಮ ಪಂಚಾಯತಿ ಕಾರ್ಯಾಲಯದ ಹತ್ತಿರ ಇರುವ ಸಂಗಪ್ಪ ಕುಂಬಾರ ಇವರ ಪಾನ್‌ಶಾಪ್ ಮುಂದುಗಡೆ ಸಿಮೆಂಟ್ ರಸ್ತೆಯ ಮೇಲೆ ಮೃತ ದೇವೇಂದ್ರಪ್ಪ ಒಬ್ಬರೇ ನಿಂತಿದ್ದಾಗ ಅಲ್ಲಿಗೆ ಆರೋಪಿ ಶರಣಪ್ಪ ತೆರಳಿ ಮನೆ ಮುಂದೆ ಕೆಲಸ ಮಾಡಿದ್ದಕ್ಕೆ ಜಗಳವಾಡಿದ್ದನು. ಅಲ್ಲಿಯೇ ಇದ್ದ ಜನರು ಜಗಳ ಬಿಡಿಸಿದ್ದರು. ಅದೇ ಸಂದರ್ಭ ಮೃತರ ಮಕ್ಕಳು ಬರುವುದನ್ನು ನೋಡಿ ನಿಮ್ಮ ತಂದೆಯನ್ನು ಮುಗಿಸಿಬಿಡುತ್ತೇನೆ ಎಂದು ಅವರ ಮೇಲೇ ಹಲ್ಲೆ ಮಾಡಿ, ಕೊಲೆ ಮಾಡುವ ಉದ್ದೇಶದಿಂದ ದೇವೇಂದ್ರಪ್ಪರನ್ನು ಎತ್ತಿ ಸಿಮೆಂಟ್ ರಸ್ತೆಗೆ ಒಗೆದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಮೆಂಟ್ ರಸ್ತೆಯ ಮೇಲೆ ಬಿದ್ದಿದ್ದರಿಂದ ತಲೆಗೆ ಹಾಗೂ ಮೂಗಿಗೆ ತೀವ್ರ ಗಾಯವಾಗಿ ರಕ್ತಸ್ರಾವವಾಗಿದ್ದು, ಚಿಕಿತ್ಸೆಗಾಗಿ ಕುಕನೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ದೇವೇಂದ್ರಪ್ಪ ಅವರು 2020 ರ ಅಕ್ಟೋಬರ್ 18 ರಂದು ಸಂಜೆ 6.45 ಗಂಟೆಗೆ ಮೃತಪಟ್ಟಿದ್ದು, ಈ ಬಗ್ಗೆ ಕುಕನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 81/2020 ಕಲಂ: 302, 323, 504, 506 ಐಪಿಸಿ ಅಡಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಸಿ.ಪಿ.ಐ ನಾಗರೆಡ್ಡಿ ಅವರು ತನಿಖೆ ನಡೆಸಿ ಆರೋಪಿಯ ವಿರುದ್ದದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಸುಮಾರು ವರ್ಷಗಳ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಶರಣಪ್ಪ ಯಲ್ಲಪ್ಪ ಕರಿಗಾರ ಈತನ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಸಿ. ಅವರು ಕಲಂ : 304 ಪಿಟಿ-1 ಐಪಿಸಿ ಅಡಿಯಲ್ಲಿ 7 ವರ್ಷಗಳ ಕಠಿಣ ಶಿಕ್ಷೆ ಹಾಗೂ ರೂ.15,000 ಗಳ ದಂಡ ವಿಧಿಸಿ ಜುಲೈ 22 ರಂದು ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣಾ ಎಂ. ಅವರು ವಾದ ಮಂಡಿಸಿದ್ದರು. ಪ್ರಕರಣದಲ್ಲಿ ಸಾಕ್ಷಿದಾರರನ್ನು ಕುಕನೂರು ಪೊಲೀಸ್ ಠಾಣೆಯ ಸಿಬ್ಬಂದಿ ಅರ್ಜುನ ಸಿಪಿಸಿ-464 ಮತ್ತು ಅಮರೇಗೌಡ ಸಿಪಿಸಿ-502 ಇವರು ಸರಿಯಾದ ಸಮಯಕ್ಕೆ ನ್ಯಾಯಾಲಯಕ್ಕೆ ಹಾಜರು ಪಡಿಸಿ ಸಹಕಾರ ನೀಡಿದ್ದಾರೆ ಎಂದು ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular