ಬೆಂಗಳೂರು: ಭಾರತೀಯ ಯೋಧರು ಕೇವಲ ಗಡಿಯಲ್ಲಿ ಶತ್ರುಗಳನ್ನಷ್ಟೇ ಸದೆಬಡಿಯುವುದಿಲ್ಲ, ದೇಶದ ಜನರ ಕಣ್ಣೀರನ್ನೂ ಒರೆಸಬಲ್ಲರು ಎಂಬುದಕ್ಕೆ ಈ ಒಂದು ಹೃದಯಸ್ಪರ್ಶಿ ಘಟನೆ ಸಾಕ್ಷಿಯಾಗಿದೆ. ರೈಲ್ವೆ ನಿಲ್ದಾಣವೊಂದರಲ್ಲಿ ವ್ಯಾಪಾರವಿಲ್ಲದೆ ಕಾಯುತ್ತಿದ್ದ ವೃದ್ಧೆಯೊಬ್ಬರ ನೆರವಿಗೆ ಧಾವಿಸಿದ ಸೈನಿಕರ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.
ವೈರಲ್ ವಿಡಿಯೋದಲ್ಲೇನಿದೆ?
ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲೆ ವೃದ್ಧೆಯೊಬ್ಬರು ಬುಟ್ಟಿಯಲ್ಲಿ ತಂದಿದ್ದ ಸಮೋಸಾಗಳನ್ನು ಮಾರುತ್ತಿದ್ದರು. ಅಂದು ವ್ಯಾಪಾರ ಅಷ್ಟೇನೂ ಚುರುಕಾಗಿರಲಿಲ್ಲ. ಅಷ್ಟರಲ್ಲಿ ಸಮವಸ್ತ್ರಧಾರಿ ಯೋಧರ (CISF/Army) ದೊಡ್ಡ ತಂಡವೊಂದು ಅಲ್ಲಿಗೆ ಆಗಮಿಸುತ್ತದೆ. ಅಜ್ಜಿಯ ಬಳಿ ಒಬ್ಬೊಬ್ಬರಾಗಿ ಬರುತ್ತಿದ್ದಂತೆ ಅಜ್ಜಿಗೆ ಅಚ್ಚರಿ ಮತ್ತು ಸಂತೋಷ
ಕೆಲವು ಸೈನಿಕರು ಅಲ್ಲೇ ನಿಂತು ಸವಿದರೆ, ಇನ್ನುಳಿದವರು ತಮ್ಮ ಸಹೋದ್ಯೋಗಿಗಳಿಗಾಗಿ ಪಾರ್ಸಲ್ ಪಡೆದುಕೊಳ್ಳುತ್ತಾರೆ. ಅಂತಿಮವಾಗಿ ಯೋಧರೆಲ್ಲರೂ ಸೇರಿ ಅಜ್ಜಿಯ ಬುಟ್ಟಿಯಲ್ಲಿದ್ದ ಕೊನೆಯ ಸಮೋಸಾದವರೆಗೂ ಎಲ್ಲವನ್ನೂ ಖರೀದಿಸುತ್ತಾರೆ.
ನಾವೆಲ್ಲವನ್ನೂ ಖಾಲಿ ಮಾಡಿದೆವು
ಈ ವಿಡಿಯೋಗೆ “ಹಮ್ನೆ ಸಬ್ ಖತಮ್ ಕರ್ ದಿಯಾ” (ನಾವೆಲ್ಲವನ್ನೂ ಖಾಲಿ ಮಾಡಿದೆವು) ಎಂಬ ಶೀರ್ಷಿಕೆ ನೀಡಲಾಗಿದೆ. ಅಜ್ಜಿಯ ಅಂದಿನ ವ್ಯಾಪಾರ ಕಷ್ಟವಿಲ್ಲದೆ ಮುಗಿಯಲಿ ಎಂಬ ಸದುದ್ದೇಶ ಯೋಧರದ್ದಾಗಿತ್ತು. ತನ್ನ ಬುಟ್ಟಿ ಖಾಲಿಯಾಗುತ್ತಿದ್ದಂತೆ ಅಜ್ಜಿಯ ಕಣ್ಣುಗಳಲ್ಲಿ ಹನಿಗೂಡಿದ ನೀರು ಮತ್ತು ಮುಖದಲ್ಲಿ ಅರಳಿದ ಆ ನಗು ಸೈನಿಕರ ಈ ಮಾನವೀಯತೆಗೆ ಹಿಡಿದ ಕನ್ನಡಿಯಾಗಿತ್ತು. ಅಜ್ಜಿ ಕೈಮುಗಿದು ತನ್ನ ಕೃತಜ್ಞತೆ ಸಲ್ಲಿಸಿದ ಆ ಕ್ಷಣ ನೆಟ್ಟಿಗರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ.
ನೆಟ್ಟಿಗರ ಮೆಚ್ಚುಗೆಯ ಸುರಿಮಳೆ
ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಆದ ಈ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ:
ದೇಶ ಕಾಯೋ ಸೈನಿಕರಿಗೆ ಜನರ ಕಷ್ಟನೂ ಗೊತ್ತು, ಇದು ನಿಜವಾದ ಭಾರತದ ಶಕ್ತಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಬಂದೂಕು ಹಿಡಿಯುವ ಕೈಗಳಲ್ಲಿ ಇಷ್ಟೊಂದು ಪ್ರೀತಿ ಇದೆಯೇ? ಯೋಧರಿಗೆ ಹ್ಯಾಟ್ಸ್ ಆಫ್ ಎಂದು ಮತ್ತೊಬ್ಬರು ಬರೆದಿದ್ದಾರೆ.
ಸಮವಸ್ತ್ರ ಧರಿಸಿದ ಈ ಹಿರೋಗಳು ಕೇವಲ ದೇಶದ ಗಡಿ ಕಾಯುವವರಲ್ಲ, ಬಡವರ ಬದುಕಿಗೆ ಆಸರೆಯಾಗುವ ಜೀವಗಳು ಎಂಬುದು ಈ ವಿಡಿಯೋ ಮೂಲಕ ಸಾಬೀತಾಗಿದೆ.
ಯೋಧರು ಕೇವಲ ದೇಶ ಕಾಯುವ ಕಾವಲುಗಾರರಲ್ಲ, ಅವರು ಪ್ರೀತಿ ಮತ್ತು ಭರವಸೆಯ ರಾಯಭಾರಿಗಳು ಎಂಬುದಕ್ಕೆ ಈ ವಿಡಿಯೋ ಒಂದು ಸುಂದರ ಉದಾಹರಣೆ

