HomeLatest Newsಸಂಜೆ ಸ್ನ್ಯಾಕ್ಸ್‌ಗೆ ಡಿಫರೆಂಟ್ ಟೇಸ್ಟ್: ಮನೆಯಲ್ಲೇ ಮಾಡಿ ಗರಿಗರಿಯಾದ ಚೌಮೇನ್ ಸಮೋಸಾ!

ಸಂಜೆ ಸ್ನ್ಯಾಕ್ಸ್‌ಗೆ ಡಿಫರೆಂಟ್ ಟೇಸ್ಟ್: ಮನೆಯಲ್ಲೇ ಮಾಡಿ ಗರಿಗರಿಯಾದ ಚೌಮೇನ್ ಸಮೋಸಾ!

ಸಂಜೆ ಚಹಾ ಕುಡಿಯುವಾಗ ಏನಾದರೂ ಮಸಾಲೆಯುಕ್ತ ಹಾಗೂ ಗರಿಗರಿಯಾದ ತಿಂಡಿ ತಿನ್ನಬೇಕು ಎನಿಸುವುದು ಸಹಜ. ಪ್ರತಿದಿನ ಒಂದೇ ರೀತಿಯ ಆಲೂಗಡ್ಡೆ ಸಮೋಸಾ ತಿಂದು ಬೇಸತ್ತಿದ್ದರೆ, ನಿಮಗಾಗಿ ಇಲ್ಲಿದೆ ಒಂದು ಭಿನ್ನ ಹಾಗೂ ಅದ್ಭುತ ರುಚಿಯ ತಿಂಡಿ. ಭಾರತೀಯ ಮತ್ತು ಚೈನೀಸ್ ಆಹಾರ ಪದ್ಧತಿಯ ಸಮ್ಮಿಶ್ರಣವಾಗಿರುವ ಸ್ಟ್ರೀಟ್-ಸ್ಟೈಲ್ ಚೌಮೇನ್ ಸಮೋಸಾವನ್ನು ಕೇವಲ 30 ನಿಮಿಷಗಳಲ್ಲಿ ಸುಲಭವಾಗಿ ಮನೆಯಲ್ಲೇ ಸಿದ್ಧಪಡಿಸಬಹುದು.

ಬೇಕಾಗುವ ಸಾಮಗ್ರಿಗಳು: ಸಮೋಸಾ ಹಿಟ್ಟು ತಯಾರಿಸಲು ಎರಡು ಕಪ್ ಮೈದಾ, ಒಂದು ಕಪ್ ಗೋಧಿ ಹಿಟ್ಟು, ಒಂದು ಚಮಚ ಓಂಕಾಳು, ಒಂದು ದೊಡ್ಡ ಚಮಚ ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು ಬೇಕಾಗುತ್ತದೆ. ಹೂರಣಕ್ಕೆ ಒಂದು ಬೌಲ್ ಬೇಯಿಸಿದ ನೂಡಲ್ಸ್, ಒಂದು ಚಮಚ ಎಣ್ಣೆ, ಎರಡು ಎಸಳು ಬೆಳ್ಳುಳ್ಳಿ, ಅರ್ಧ ಕಪ್ ಪನೀರ್ ಕ್ಯೂಬ್ಸ್, ತಲಾ ಒಂದು ಈರುಳ್ಳಿ, ಕ್ಯಾರೆಟ್ ಹಾಗೂ ಕ್ಯಾಪ್ಸಿಕಂ, ಒಂದು ಕಪ್ ಎಲೆಕೋಸು, ಎರಡು ಚಮಚ ಸೋಯಾ ಸಾಸ್, ಒಂದು ಚಮಚ ವಿನೆಗರ್ ಮತ್ತು ಕರಿಯಲು ಎಣ್ಣೆ ಅಗತ್ಯವಿರುತ್ತದೆ.

ತಯಾರಿಸುವ ವಿಧಾನ: ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ. ನಂತರ ಕ್ಯಾರೆಟ್, ಕ್ಯಾಪ್ಸಿಕಂ, ಎಲೆಕೋಸು ಹಾಗೂ ಪನೀರ್ ತುಂಡುಗಳನ್ನು ಸೇರಿಸಿ ಹೆಚ್ಚಿನ ಉರಿಯಲ್ಲಿ ಎರಡು ನಿಮಿಷ ಹುರಿಯಿರಿ. ಇದಕ್ಕೆ ಉಪ್ಪು, ಸೋಯಾ ಸಾಸ್, ವಿನೆಗರ್ ಹಾಗೂ ಬೇಯಿಸಿದ ನೂಡಲ್ಸ್ ಹಾಕಿ ಚೆನ್ನಾಗಿ ಬೆರೆಸಿ ಒಲೆಯಿಂದ ಕೆಳಗಿಳಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮತ್ತೊಂದೆಡೆ ಮೈದಾ ಮತ್ತು ಗೋಧಿ ಹಿಟ್ಟಿಗೆ ಉಪ್ಪು, ಓಂಕಾಳು ಹಾಗೂ ಎಣ್ಣೆ ಸೇರಿಸಿ ನೀರು ಹಾಕುತ್ತಾ ಗಟ್ಟಿಯಾಗಿ ಕಲಸಿ ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಈ ಹಿಟ್ಟಿನಿಂದ ಸಣ್ಣ ಚಪಾತಿಗಳನ್ನು ಲಟ್ಟಿಸಿ, ಮಧ್ಯಕ್ಕೆ ಕತ್ತರಿಸಿ ಅರ್ಧ ಚಂದ್ರಾಕೃತಿ ಮಾಡಿಕೊಳ್ಳಿ. ಈ ಹಿಟ್ಟನ್ನು ಕೋನ್ ಆಕಾರಕ್ಕೆ ಮಡಚಿ, ಅದರೊಳಗೆ ಸಿದ್ಧಪಡಿಸಿದ ಚೌಮೇನ್ ಮಿಶ್ರಣವನ್ನು ತುಂಬಿ ಅಂಚುಗಳನ್ನು ನೀರು ಸವರಿ ಗಟ್ಟಿಯಾಗಿ ಮುಚ್ಚಿ. ಕೊನೆಯದಾಗಿ ಬಿಸಿ ಎಣ್ಣೆಯಲ್ಲಿ ಈ ಸಮೋಸಾಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಕರಿದರೆ ಬಿಸಿಬಿಸಿಯಾದ ಚೌಮೇನ್ ಸಮೋಸಾ ಸವಿಯಲು ಸಿದ್ಧವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular