ಇಂದು ( ಏಪ್ರಿಲ್ 23 ) ತಮಿಳುನಾಡಿನ ಎಲ್ಲ 234 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 9 ಗಂಟೆ ವೇಳೆಗೆ ಶೇ. 17.69ರಷ್ಟು ಮತದಾನ ನಡೆದಿದ್ದು, ಇದು ಕಳೆದ ಬಾರಿಯ ಚುನಾವಣೆಗಿಂತ 4% ಅಧಿಕವಾಗಿದೆ.
ಇಷ್ಟು ವರ್ಷಗಳ ಕಾಲ ಡಿಎಂಕೆ ಹಾಗೂ ಎಐಡಿಎಂಕೆ ನಡುವೆ ನಡೆಯುತ್ತಿದ್ದ ತಮಿಳುನಾಡು ಚುನಾವಣಾ ಸಮರಕ್ಕೆ ಈ ಬಾರಿ ನಟ ವಿಜಯ್ ನೇತೃತ್ವದ ಟಿವಿಕೆ ಸಹ ಸೇರ್ಪಡೆಗೊಂಡಿರುವುದು ಮತದಾನದ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಲು ಕಾರಣ ಎನ್ನಲಾಗುತ್ತಿದೆ.
ಇನ್ನು ವಿಜಯ್ ತಮ್ಮ ಬಹುತೇಕ ಎಲ್ಲ ಚುನಾವಣಾ ಪ್ರಚಾರದ ಭಾಷಣದಲ್ಲೂ ಡಿಎಂಕೆ ವಿರುದ್ಧ ಹರಿಹಾಯ್ದಿದ್ದು, ಆಡಳಿತ ಪಕ್ಷಕ್ಕೆ ಪೆಟ್ಟು ನೀಡುವ ಯತ್ನ ನಡೆಸಿದ್ದರು. ಇತ್ತ ಡಿಎಂಕೆ ಬೆಂಬಲಿಗರು ಈ ಕೌಂಟರ್‌ಗಳಿಂತ ತಮ್ಮ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ ಎಂದು ಹೇಳಿಕೊಂಡಿದ್ದರು.
ಇದೇ ವಿಷಯದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗಳು ಏರ್ಪಟ್ಟು, ವಿಜಯ್ ಆಗಮನ ತಮಿಳುನಾಡು ರಾಜಕೀಯದಲ್ಲಿ ವ್ಯತ್ಯಾಸ ತರಲಿದೆಯಾ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಇನ್ನು ತಮಿಳಿನ ಸ್ಟಾರ್ ನಟ ಹಾಗೂ ನಟಿಯರು ತಮ್ಮ ಹಕ್ಕನ್ನು ಚಲಾಯಿಸಿದ್ದು, ಬಳಿಕ ಮಾಧ್ಯಮಗಳ ಜತೆ ಮಾತನಾಡಿದ್ದಾರೆ. ನಟ ಶಿವಕಾರ್ತಿಕೇಯನ್ ಸಹ ತಮ್ಮ ಮತ ಚಲಾಯಿಸಿದ ಬಳಿಕ ಮಾತನಾಡಿದ್ದು, ಈ ಬಾರಿಯ ಚುನಾವಣೆ ಮೇಲೆ ಸಾಮಾಜಿಕ ಜಾಲತಾಣದ ಪರಿಣಾಮ ಜೋರಿದೆ ಎಂದಿದ್ದಾರೆ.
ಎಷ್ಟು ಶೇಕಡಾಂಶ ಮತದಾನವಾಗಿದೆ ಎಂಬುದರ ಬಗ್ಗೆ ತಮಗೆ ಅರಿವಿಲ್ಲ ಎಂದು ನಕ್ಕ ಶಿವಕಾರ್ತಿಕೇಯನ್ ಈ ಬಾರಿ ಸಾಮಾಜಿಕ ಜಾಲತಾಣದ ಪರಿಣಾಮ ಜೋರಿದ್ದು, ಏನಾಗಲಿದೆ ಎಂಬ ಕುತೂಹಲ ತನಗೂ ಇದೆ ಎಂದಿದ್ದಾರೆ. ಹೀಗೆ ಶಿವಕಾರ್ತಿಕೇಯನ್ ನೀಡಿದ ಹೇಳಿಕೆಯನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರು ನಟ ವಿಜಯ್‌ರನ್ನು ಬೆಂಬಲಿಸಿದ್ರಾ ಎಂಬ ಅನುಮಾನವನ್ನು ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟಿವಿಕೆ ಪಕ್ಷದ ಅಬ್ಬರ ಜೋರಾಗಿದ್ದು, ಇದರ ಕುರಿತು ಶಿವಕಾರ್ತಿಕೇಯನ್ ಮಾತನಾಡಿದ್ದು, ಪರೋಕ್ಷವಾಗಿ ಡಿಎಂಕೆಗೆ ಟಿವಿಕೆ ಪೈಪೋಟಿ ಕೊಡಲಿದೆ ಎಂದು ಹೇಳಿದ್ದಾರೆ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.

