ಬೆಂಗಳೂರು: ಬಿಎಲ್ ಒ ಗಳು ಮನೆ ಮನೆಗೆ ತೆರಳಿ ಎಸ್ ಐಆರ್ ನಡೆಸುವುದನ್ನು ಬಿಟ್ಟು ರಾಮನಗರದಲ್ಲಿ ಕಲ್ಯಾಣ ಮಂಟಪದಲ್ಲಿ ಎಸ್ ಐಆರ್ ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜಯನಗರದಲ್ಲಿ ಮಸೀದಿಯಲ್ಲಿ ಎಸ್ ಐಆರ್ ನಡೆಯುತ್ತಿದೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ವಿಜಯೇಂದ್ರ, ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಹೋಗಿ ಪರಿಶೀಲನೆ ನಡೆಸುವ ಬದಲು, ಬೆಂಗಳೂರಿನ ಜಯನಗರದಲ್ಲಿ ಮಸೀದಿ ಒಳಗೆ ಎಸ್ಐಆರ್ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ಮುಂಗಾರು ಅಧಿವೇಶನ ಮಾಡುತ್ತಾರಂತೆ. ಆದರೆ ಅಧಿವೇಶನ ಮುಂದೂಡಲು ಎಸ್ಐಆರ್ ಕಾರಣ ಅಲ್ಲ. ರೇಟ್ ಫಿಕ್ಸ್ ಆಗದೆ ಸಂಪುಟ ವಿಸ್ತರಣೆ ಡೇಟ್ ಫಿಕ್ಸ್ ಆಗುತ್ತಿಲ್ಲ. ಶಾಸಕರು ಏನು ಮನೆ ಮನೆಗೆ ಹೋಗಿ ಎಸ್ಐಆರ್ ಮಾಡುತ್ತಿದ್ದಾರಾ? ಬದಲಾಗಿ ಕಾಂಗ್ರೆಸ್ ಶಾಸಕರು ಬಿಎಲ್ಒಗಳನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ. ಜಯನಗರದಲ್ಲಿ ಮಸೀದಿ ಒಳಗೆ ಎಸ್ಐಆರ್ ಮಾಡುತ್ತಿದ್ದಾರೆ. ಹಿಂದೂಗಳು ಮಸೀದಿ ಒಳಗೆ ಹೋಗಲು ಸಾಧ್ಯವಾಗದ ರೀತಿ ಆಗಿದೆ. ರಾಜ್ಯ ಸರ್ಕಾರ ಇಲ್ಲಿ ಷಡ್ಯಂತ್ರ ಮಾಡುತ್ತಿದೆ ಎಂದವರು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಕೂಡ ನಿನ್ನೆ ಆಕ್ಷೇಪ ತೆಗೆದಿದ್ದರು. ಕಾಂಗ್ರೆಸ್ ಸರ್ಕಾರ ಚುನಾವಣಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಅಕ್ರಮಗಳಿಗೆ ಪ್ರೇರಣೆ ನೀಡುತ್ತಿದೆ ಎಂದವರು ಗಂಭೀರ ಆರೋಪ ಮಾಡಿದ್ದರು. ಬಾಂಗ್ಲಾದೇಶದಿಂದ ಬಂದವರನ್ನು ಪೋಷಿಸಿ, ಅವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ರಾಮನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇಂತಹ ಅಕ್ರಮ ಮತದಾರರಿದ್ದು, ಕಳ್ಳ ಮತದಾರರನ್ನು ಅರ್ಹರನ್ನಾಗಿ ಪರಿವರ್ತಿಸಲು ಯತ್ನಿಸಲಾಗುತ್ತಿದೆ. ಚೌಲ್ಟ್ರಿಗಳಲ್ಲಿ ಜನರನ್ನು ಕೂರಿಸಿ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದವರು ಹೇಳಿದ್ದರು.
ಈ ಹೇಳಿಕೆ ಬೆನ್ನಲ್ಲೇ ಬಿ.ವೈ. ವಿಜಯೇಂದ್ರ ಕೂಡ ಇಂತಹುದ್ದೇ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಬೆಂಗಳೂರಿನ ಜಯನಗರದಲ್ಲಿ ಮಸೀದಿ ಒಳಗೆ ಎಸ್ಐಆರ್ ಮಾಡಲಾಗುತ್ತಿದೆ ಎಂದಿದ್ದಾರೆ.

