ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್ಐಆರ್) ನಿಂದ ಅರ್ಹ ಮತದಾರರಿಗೆ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ನಾಗರಿಕ ಸಂಘಟನೆ ಪ್ರತಿನಿಧಿಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
ನಟ ಪ್ರಕಾಶ್ ರಾಜ್ ನೇತೃತ್ವದ ಎದ್ದೇಳು ಕರ್ನಾಟಕ ಮತ್ತು ಇತರ ಸಂಘಟನೆಯವರು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಎಸ್ಐಆರ್ ಲೋಪದೋಷದಿಂದ ಕೂಡಿದೆ ಎಂದು ದೂರು ನೀಡಿದ್ದಾರೆ.
ದೇಶದಲ್ಲೇ ಕರ್ನಾಟಕದಲ್ಲಿ ಅತಿ ಹೆಚ್ಚಿನ ಪ್ರಮಾಣದ ಮತದಾರರ ಹೆಸರನ್ನು ಪಟ್ಟಿಯಿಂದ ಕಿತ್ತೊಗೆಯುವ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು 1.09 ಕೋಟಿ ಮತದಾರರು ಎಎಸ್ ಡಿಡಿಒ ಪಟ್ಟಿಯಲ್ಲಿದ್ದು, ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ಹೆಚ್ಚಿನ ಪ್ರಮಾಣದ ಹೆಸರುಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ರಾಜ್ಯದ ಸುಮಾರು 3000 ಬೂತ್ ಗಳಲ್ಲಿ ಡಿಲೀಷನ್ ಪ್ರಮಾಣ ಶೇಕಡ 60ಕ್ಕಿಂತಲೂ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ನ್ಯಾಯಸಮ್ಮತವಾಗಿ ಎಸ್ಐಆರ್ ಪ್ರಕ್ರಿಯೆ ನಡೆಸಬೇಕು. ಇದಕ್ಕಾಗಿ ಈ ಪ್ರಕ್ರಿಯೆಯನ್ನು ಕನಿಷ್ಠ ಮೂರು ತಿಂಗಳು ವಿಸ್ತರಿಸಬೇಕು. ನಂತರ ಅದನ್ನು ಪೂರ್ಣಗೊಳಿಸಲು ಒಂದು ವರ್ಷ ಕಾಲಾವಕಾಶ ನೀಡುವಂತೆ ಚುನಾವಣಾ ಆಯೋಗವನ್ನು ರಾಜ್ಯ ಸರ್ಕಾರ ಒತ್ತಾಯಿಸಬೇಕು ಎಂದು ಹೇಳಲಾಗಿದೆ.
ಸ್ಥಳಾಂತರ, ಗೈರು ಮತ್ತು ಇತರರು ವರ್ಗದಲ್ಲಿರುವವರನ್ನು ತಕ್ಷಣವೇ ಡಿಲೀಟ್ ಮಾಡದೆ ಬಿಎಲ್ಒಗಳು ಮನೆಮನೆಗೆ ತೆರಳಿ ಪರಿಶೀಲಿಸಬೇಕು. ಸ್ಥಳಾಂತರವಾದ ಮತದಾರರಿಗೆ ಮತ ವರ್ಗಾವಣೆಗೆ ಅಗತ್ಯವಿರುವ ಫಾರಂ ಮತ್ತು ಹೊಸ ಮತದಾರರ ನೋಂದಣಿಗೆ ಅವಕಾಶ ಕಲ್ಪಿಸಬೇಕು. ಅರ್ಹ ಮತದಾರರನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಲು ರಾಜ್ಯ ಸರ್ಕಾರವೇ ಮುಂದಾಗಬೇಕು. ಸಹಾಯವಾಣಿ ಕೇಂದ್ರ ತೆರೆಯಬೇಕು. ಮನೆಮನೆಗೆ ತೆರಳಿ ಮಾಹಿತಿ ನೀಡಬೇಕು ಎಂದು ಹೇಳಲಾಗಿದೆ.

