ಮಹಿಳಾ ಸಬಲೀಕರಣ ಎನ್ನುವುದು ಕೇವಲ ವೇದಿಕೆಯ ಭಾಷಣ ಅಥವಾ ಸೋಶಿಯಲ್ ಮೀಡಿಯಾದ ಹ್ಯಾಶ್ಟ್ಯಾಗ್ಗಳಿಗೆ ಸೀಮಿತವಾಗಬೇಕಿಲ್ಲ; ಅದು ರಣಬಿಸಿಲಲ್ಲೂ ಛಲ ಬಿಡದೆ ದುಡಿಯುವ ಶ್ರಮಿಕ ಜೀವಗಳ ಕಾಯಕದಲ್ಲಿ ಅಡಗಿದೆ. ಇದಕ್ಕೆ ತಾಜಾ ಉದಾಹರಣೆ ಹೈದರಾಬಾದ್ನ ರಸ್ತೆಗಳಲ್ಲಿ ಸಿಕ್ಕ ನಂದಿನಿ ಅವರ ಬದುಕು. ಇತ್ತೀಚೆಗೆ ಸುರೇಶ್ ಕೊಚಾಟಿಲ್ ಅವರು ಹಂಚಿಕೊಂಡ ಈಕೆಯ ಸ್ಫೂರ್ತಿದಾಯಕ ಕಥೆ ಸಬಲೀಕರಣ ಎಂದರೆ ಬರಿ ಪದವಲ್ಲ ಅದೊಂದು ಛಲ ಎನ್ನುವುದನ್ನು ಇಡೀ ಜಗತ್ತಿಗೆ ಸಾರುತ್ತಿದೆ ಸುರೇಶ್ ಕೊಚಾಟಿಲ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ಸಣ್ಣ ಕಥೆ ಈಗ ಭಾರಿ ವೈರಲ್ ಆಗುತ್ತಿದೆ.
ಕ್ಯಾಬ್ ಬುಕ್ ಮಾಡಿದಾಗ ಕಾದಿತ್ತು ಸರ್ಪ್ರೈಸ್
ಮಾಧ್ಯಮ ವೃತ್ತಿಯಲ್ಲಿರುವ ಸುರೇಶ್ ಅವರು ಒಂದು ಸ್ಟುಡಿಯೋದಿಂದ ಮತ್ತೊಂದಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದ್ದರು. ಇಬ್ಬರು ಚಾಲಕರು ರೈಡ್ ಕ್ಯಾನ್ಸಲ್ ಮಾಡಿದ ನಂತರ ಮೂರನೇ ಬಾರಿ ರೈಡ್ ಕನ್ಫರ್ಮ್ ಆಯಿತು. ಸ್ಕ್ರೀನ್ ಮೇಲೆ ಚಾಲಕರ ಹೆಸರು ನೋಡಿದ ಸುರೇಶ್ ಅವರಿಗೆ ಆಶ್ಚರ್ಯವಾಯಿತು ಅದು ಒಬ್ಬ ಮಹಿಳೆಯ ಹೆಸರು ಕುತೂಹಲದಿಂದ ಕಾಯುತ್ತಿದ್ದ ಅವರಿಗೆ ಎದುರಾಗಿದ್ದು ನಗುಮುಖದ ನಂದಿನಿ.
ನಂದಿನಿ ಎಂಬ ಧೈರ್ಯಶಾಲಿ ಮಹಿಳೆ
ಕ್ಯಾಬ್ ಚಾಲಕಿ ನಂದಿನಿ ಅವರು ಕಳೆದ ಒಂದು ವರ್ಷದಿಂದ ಉಬರ್ನಲ್ಲಿ ಚಾಲಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೂಲತಃ ವಿಜಯವಾಡದವರಾದ ಇವರು ಮೂವರು ಮಕ್ಕಳನ್ನು ಹೊಂದಿರುವ ಏಕಾಂಗಿ ತಾಯಿ (Single Mother).ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು, ಅವರ ಭವಿಷ್ಯ ಉಜ್ವಲವಾಗಿರಬೇಕು ಎಂಬ ಒಂದೇ ಒಂದು ಗುರಿಯಿಂದ ನಂದಿನಿ ಅವರು ಹೈದರಾಬಾದ್ನ ಟ್ರಾಫಿಕ್ ನಡುವೆ ಪ್ರತಿದಿನ ಸ್ಟೀರಿಂಗ್ ಹಿಡಿಯುತ್ತಿದ್ದಾರೆ.
ಎದುರಾದ ಸಂಕಷ್ಟಗಳಿಗೆ ಹೆದರಿ ಕೂರದೆ, ಕಷ್ಟಪಟ್ಟು ದುಡಿಯುವ ಅವರ ಹಠ ನಿಜಕ್ಕೂ ಮಾದರಿ.ಇವರ ಈ ಪರಿಶ್ರಮದ ಬಗ್ಗೆ ಸುರೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ಪೋಸ್ಟ್ ಹಂಚಿಕೊಂಡಿದ್ದಾರೆ.ಅವರ ಅನುಮತಿಯೊಂದಿಗೆ ಈ ಫೋಟೋ ಹಂಚಿಕೊಳ್ಳುತ್ತಿದ್ದೇನೆ. ಇದು ಅಧ್ವಾನಗಳ ನಡುವೆ ಗೆದ್ದು ತೋರಿಸಿದ ಮಹಿಳೆಯ ಅದ್ಭುತ ಉದಾಹರಣೆ” ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಕಿಡಿ
ನಂದಿನಿ ಅವರ ಕಥೆ 2 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು ನೆಟ್ಟಿಗರಿಂದ ಮಿಶ್ರ ಹಾಗೂ ಅರ್ಥಪೂರ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ:
ಇದು ಬರೀ ಘೋಷಣೆಯಲ್ಲ, ಅನುಭವಿಸುತ್ತಿರುವ ಧೈರ್ಯ. ಪ್ರತಿ ಕಿಲೋಮೀಟರ್ನಲ್ಲೂ ತನ್ನ ಮಕ್ಕಳ ಕನಸುಗಳಿಗೆ ಇಂಧನ ತುಂಬುತ್ತಿರುವ ಇವರ ಶ್ರಮಕ್ಕೆ ನಮ್ಮ ಗೌರವ ಎಂದು ಒಬ್ಬರು ಶ್ಲಾಘಿಸಿದ್ದಾರೆ.
ಮಹಿಳೆಯರಿಗೆ ಇಂತಹ ಉದ್ಯೋಗಾವಕಾಶ ನೀಡುತ್ತಿರುವ ಉಬರ್ ಸಂಸ್ಥೆಯನ್ನೂ ಹಲವರು ಶ್ಲಾಘಿಸಿದ್ದಾರೆ.
ಮೂವರು ಮಕ್ಕಳನ್ನು ಒಬ್ಬರೇ ಸಾಕುವುದು ಸುಲಭವಲ್ಲ. ಮಹಿಳೆಯರಿಗೆ ಕ್ಯಾಬ್ ಚಾಲನೆಯ ಕೆಲಸ ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ಒತ್ತಡದಿಂದ ಕೂಡಿದೆ ಎಂದು ಇನ್ನೊಬ್ಬ ಬಳಕೆದಾರರು ಕಾಳಜಿ ವ್ಯಕ್ತಪಡಿಸಿದ್ದಾರೆ.

