ಮೈಸೂರು: 25 ಲಕ್ಷ ಲಂಚ ಪಡೆಯುತ್ತಿದ್ದಾಗ ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಪುತ್ರನ ವಿರುದ್ಧ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯಯ, ಕಾನೂನಿನ ಮುಂದೆ ಯಾರೂ ದೊಡ್ದವರಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿದೆ ಎಂದು ತಿಳಿಸಿದ್ದಾರೆ. ಅಬಕಾರಿ ಡಿಸಿ ಮೇಲೆ ಲೋಕಾಯುಕ್ತ ದಾಳಿ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಆಡಿಯೋದಲ್ಲಿ ಪ್ರಸ್ತಾಪವಾಗಿರುವ ಬಗ್ಗೆ ಕಾನೂನಿನ ಕ್ರಮಕ್ಕೆ ನಾವು ಅಡ್ಡಿಬರುವುದಿಲ್ಲ ಎಂದು ಹೇಳಿದರು.
40% ಕಮಿಷನ್ ಪಡೆಯುತ್ತಾರೆ ಎಂದು ಗುತ್ತಿಗೆದಾರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಆರೋಪ ಮಾಡಿದ್ದರಲ್ಲ. ಆರೋಪ ಬಂದಿದ್ದರೆ ತನಿಖೆ ನಡೆಸಲಿ ಕಾನೂನು ಕ್ರಮಕ್ಕೆ ನಾವು ಅಡ್ಡಿಯಾಗಲ್ಲ ಎಂದರು.
ಇನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐ ತನಿಖೆಗೆ ಒಪ್ಪಿಸಿರಲಿಲ್ಲ. ನಮ್ಮನ್ನು ಪ್ರಶ್ನೆ ಮಾಡಲು ಅವರಿಗೆ ಯಾವ ನೈತಿಕತೆಯೂ ಇಲ್ಲ. ಅವರು ಅಧಿಕಾರದಲ್ಲಿದ್ದಾಗ ಯಾವುದಾದರೂ ಒಂದು ಪ್ರಕರಣವನ್ನಾದರೂ ಕೊಟ್ಟಿದ್ದರೆ ನಮ್ಮನ್ನು ಕೇಳಬಹುದು. ನಾವು ಅಧಿಕಾರದಲ್ಲಿದ್ದಾಗ ಸುಮಾರು ಏಳೆಂಟು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು ಎಂದರು.
ಬಳ್ಳಾರಿ ಪ್ರಕರಣದ ಬಗ್ಗೆ ಬಿಜೆಪಿ ಜನಾಂದೋಲನ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ವಿರೋಧಪಕ್ಷದಲ್ಲಿರುವಾಗ ಯಾವ ಆಂದೋಲನ, ಪ್ರತಿಭಟನೆಗಳನ್ನು ಮಾಡುತ್ತಾರೆ ಎನ್ನುವುದು ಅವರ ಪಕ್ಷಕ್ಕೆ ಸೇರಿದ ವಿಚಾರ. ಅದಕ್ಕೆ ನಾವು ಉತ್ತರ ಕೊಡುತ್ತೇವೆ ಎಂದರು.

