ಬೆಂಗಳೂರು: ಉಪ ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿನ ಬಣ ಬಡಿದಾಟ ಮತ್ತೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಪದೇಪದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.
ಹೀಗಿದ್ದರೂ ತಮ್ಮ ಆಪ್ತರ ರಕ್ಷಣೆಗೆ ಮುಂದಾಗದ ಮುಖ್ಯಮಂತ್ರಿಗಳ ನಡೆಗೆ ಬಹಿರಂಗ ಅಸಮಾಧಾನ ವ್ಯಕ್ತವಾಗಿದೆ. ಸಿದ್ದರಾಮಯ್ಯ ತಮ್ಮ ಆಪ್ತರ ವಿಷಯದಲ್ಲಿ ಗಟ್ಟಿ ನಿಲುವು ತಾಳುತ್ತಿಲ್ಲ. ಅಸಹಾಯಕರಂತೆ ಅವರು ವರ್ತಿಸುತ್ತಿದ್ದು, ಹೈಕಮಾಂಡ್ ಮಟ್ಟದಲ್ಲಿ ಆಪ್ತರ ರಕ್ಷಣೆಗೆ ಏನು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾದರೆ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಭಾರಿ ಹಿನ್ನಡೆ ಆಗುತ್ತದೆ. ಪಕ್ಷಕ್ಕೆ ಕೆಲಸ ಮಾಡಿದವರನ್ನ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗ್ತಿದೆ. ಹೀಗೆ ಆದರೆ ಕೆಲ ಸಮುದಾಯಗಳು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುತ್ತಿವೆ ಎಂದು ಸಿದ್ದರಾಮಯ್ಯ ಆಪ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಕೆ.ಎನ್. ರಾಜಣ್ಣ, ಸಚಿವ ಎಂ.ಬಿ.ಪಾಟೀಲ್ ಮತ್ತು ಸಲೀಂ ಅಹ್ಮದ್ ಮುಖ್ಯಮಂತ್ರಿ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ನ ಮುಸ್ಲಿಂ ನಾಯಕರ ವಿರುದ್ಧ ಕ್ರಮ ಆಗುತ್ತಿರುವ ವಿಚಾರ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸತೀಶ್ ಜಾರಕಿಹೊಳಿ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

