HomeLatest NewsBIG NEWS: ಪೊಲೀಸರ ತನಿಖೆಯ ಗುಣಮಟ್ಟ ಹೆಚ್ಚಿಸಿ: ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

BIG NEWS: ಪೊಲೀಸರ ತನಿಖೆಯ ಗುಣಮಟ್ಟ ಹೆಚ್ಚಿಸಿ: ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಬೆಂಗಳೂರು: ಪೊಲೀಸರ ತನಿಖೆಯ ಗುಣಮಟ್ಟ ಕಡಿಮೆಯಾಗಿದ್ದು ಇದನ್ನು ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್ ಸೂಚನೆ ನೀಡಿದ್ದಾರೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮತ್ತು ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಕಡಿಮೆ ಆಗಿರುವುದು ಸಮಾಧಾನದ ಸಂಗತಿಯಾದರೂ ತನಿಖೆಯ ಗುಣಮಟ್ಟ ಹೆಚ್ಚಿಸಬೇಕು ಎಂದರು.

ಬೀದರ್ ನಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿ ಯಾರು ಎಂದು ಗೊತ್ತಾಗಿದ್ದರೂ 5 ತಿಂಗಳುಗಳಿಂದ ಆತನನ್ನು ಬಂಧಿಸದೇ ಇರುವುದನ್ನು ಉಲ್ಲೇಖಿಸಿ ಹೇಳಿದರು. ಬಿಡಿ ಬಿಡಿ ಪ್ರಕರಣಗಳಲ್ಲಿ ತನಿಖೆಯ ಗುಣಮಟ್ಟ ಹೆಚ್ಚಿದ್ದರೂ ಒಟ್ಟಾರೆಯಾಗಿ ಗಮನಿಸಿದಾಗ ತನಿಖೆಯ ಗುಣಮಟ್ಟ ಕುಸಿದಿರುವುದು ಸ್ಪಷ್ಟವಾಗುತ್ತಿದೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನು 1983 ರಿಂದ ಶಾಸಕನಾಗಿ ಸಿಎಂ ಆಗಿದ್ದೀನಿ. ಬೆಂಗಳೂರಿನಲ್ಲಿ ನಡೆದ ಇಂಥಾ ಕಾಲ್ತುಳಿತ ಪ್ರಕರಣವನ್ನು ಹಿಂದೆಂದೂ ನಾನು ನೋಡಿರಲಿಲ್ಲ. ಗುಪ್ತಚರ ಇಲಾಖೆ ಇರುವುದು ಏಕೆ ? ಸರಿಯಾದ ಸಮಗ್ರ ಮಾಹಿತಿ ನೀಡಲಿಲ್ಲ. ಪರಿಣಾಮ 11 ಮಂದಿ ಮೃತಪಟ್ಟರು. ಕಾಲ್ತುಳಿತ ಘಟನೆ ನಡೆದ ದಿನ‌ ಮಧ್ಯಾಹ್ನ 3:50 ಕ್ಕೇ ಸಾವುಗಳು ಸಂಭವಿಸಿದ್ದವು. ಆದರೂ ಸರಿಯಾದ ಮಾಹಿತಿ ಕೊಟ್ಟಿರಲಿಲ್ಲ. ಇದು ತಪ್ಪಲ್ಲವಾ ? 5:45 ಕ್ಕೆ ನಾನಾಗೇ ಕೇಳಿದಾಗಲೂ ಒಂದೇ ಸಾವು ಆಗಿದೆ ಎನ್ನುವ ಮಾಹಿತಿ ನೀಡಿದರು. ಅಷ್ಟೊತ್ತಿಗಾಗಲೇ 11 ಸಾವು ಆಗಿಬಿಟ್ಟಿತ್ತು. ಹಿರಿಯ ಅಧಿಕಾರಿ ಸರಿಯಾದ ಮಾಹಿತಿಯನ್ನು ತಕ್ಷಣ ನಮಗೆ ನೀಡಿದ್ದರೆ ಸ್ಟೇಡಿಯಂ ಕಾರ್ಯಕ್ರಮ ರದ್ದುಗೊಳಿಸಲು ಸೂಚನೆ ನೀಡಬಹುದಿತ್ತು ಎಂದರು.

ಹಿರಿಯ ಅಧಿಕಾರಿಗಳ ಸಸ್ಪೆಂಡ್ ಮಾಡಬೇಕಾಗಿ ಬಂದಿದ್ದಕ್ಕೆ ನನಗೂ ಬೇಸರ ಇದೆ. ಆದರೆ ತಪ್ಪಾಗಿದ್ದು ನಿಜ ತಾನೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ಅಪರಾಧ ಪ್ರಕರಣಗಳಲ್ಲಿ ಆರೋಪ ಪಟ್ಟಿಯನ್ನು ಸೂಕ್ತವಾಗಿ, ಪರಿಣಾಮಕಾರಿಯಗಿ, ಸರಿಯಾದ ಸಮಯಕ್ಕೆ ಸಲ್ಲಿಸದಿರುವುದೂ ದೊಡ್ಡ ವೈಫಲ್ಯ. ಇಂಥಾದ್ದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ದ್ವೇಷ ಭಾಷಣ ಮಾಡುವವರ ವಿರುದ್ಧ, ಜನರ-ರಾಜ್ಯದ ನೆಮ್ಮದಿ ಕೆಡಿಸುವವರ ವಿರುದ್ಧ ಸ್ವಯಂಪ್ರೇರಿತ ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ, ನೀವು ಕ್ರಮ‌ ತೆಗೆದುಕೊಳ್ಳದಿದ್ದರೆ ನಾವು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೋಮು ಘರ್ಷಣೆ ಮತ್ತು ಕೊಲೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹೆಚ್ಚಾಗಿ ಆಗುತ್ತಿದೆ. ಇತರೆ ಜಿಲ್ಲೆಗಳಲ್ಲಿ ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ದಕ್ಷಿಣ ಕನ್ನಡ ಜಿಲ್ಲೆಯ ನೆಮ್ಮದಿ ಕೆಡಿಸುವವರನ್ನು ಮೂಲದಿಂದಲೇ ಪತ್ತೆ ಹಚ್ಚಿ ಅವನು ಯಾರೇ ಇದ್ದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಸ್ಪಷ್ಟ ಸೂಚನೆ ನೀಡಿದರು.

ನಾವು ವ್ಯವಸ್ಥೆಯನ್ನು ದೂಷಿಸಿಕೊಂಡು ಕೈ ಕಟ್ಟಿಕೊಂಡು ಕೂರೋದಲ್ಲ. ಪೊಲೀಸ್ ಠಾಣೆಗಳು ಜನಸ್ನೇಹಿ ಆಗುವ ಜೊತೆಗೆ ಅಪರಾಧ ಮನಸ್ಥಿತಿಯವರಿಗೆ ಕಾನೂನಿನ ಬಗ್ಗೆ ಭಯ ಇರುವ ವಾತಾವರಣ ಸೃಷ್ಟಿಸಬೇಕು ಎಂದು ಕರೆ ನೀಡಿದರು.

For Latest News Updates, Join Our Whatsapp Community🚩
RELATED ARTICLES

Most Popular