HomeKarnatakaರಾಜ್ಯದ ಜನರ ಹೊಟ್ಟೆ ತಣಿಸಿ ‘ಅನ್ನರಾಮಯ್ಯ’ ಎಂದೇ ಜನರ ಹೃದಯದಲ್ಲಿ ನೆಲೆಯಾದವರು ಸಿದ್ದರಾಮಯ್ಯ ; ಸಚಿವ...

ರಾಜ್ಯದ ಜನರ ಹೊಟ್ಟೆ ತಣಿಸಿ ‘ಅನ್ನರಾಮಯ್ಯ’ ಎಂದೇ ಜನರ ಹೃದಯದಲ್ಲಿ ನೆಲೆಯಾದವರು ಸಿದ್ದರಾಮಯ್ಯ ; ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು :    ರಾಜಕೀಯ ಸಿದ್ಧಾಂತಗಳ ಮೀರಿದ ಧೀಮಂತ ನಾಯಕ, ಶೋಷಿತರ ಮತ್ತು ಬಡವರ ಧ್ವನಿಯಾಗಿ ಸದಾ ಮಿಡಿಯುವ ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಅಧಿಕಾರವಾಗಲಿ, ಕುರ್ಚಿಯಾಗಲಿ ಎಂದಿಗೂ ದೊಡ್ಡದಲ್ಲ. ಹೈಕಮಾಂಡ್ ಹಾಗೂ ಪಕ್ಷದ ತೀರ್ಮಾನಕ್ಕೆ ಸಂಪೂರ್ಣ ಬದ್ಧರಾಗಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು, ಅವರು ಅಧಿಕಾರಕ್ಕೆ ಅಂಟಿಕೊಂಡ ನಾಯಕನಲ್ಲ, ಬದಲಿಗೆ ಪಕ್ಷದ ಶಿಸ್ತು ಮತ್ತು ಸಿದ್ಧಾಂತಕ್ಕೆ ತಲೆಬಾಗುವ ಧೀಮಂತ ವ್ಯಕ್ತಿತ್ವದವರು ಎಂಬುದು ಸಾಬೀತುಪಡಿಸಿದೆ ಎಂದು ಸಚಿವ ದಿನೇಶ್ ಗುಂಡೂರಾವ್  ಹೇಳಿದರು.

ಸ್ವತಃ ಬಡತನ ಮತ್ತು ಅನ್ನದ ಬೆಲೆಯನ್ನು ಹತ್ತಿರದಿಂದ ಅರಿತವರಾಗಿ, ‘ಹಸಿವು ಮುಕ್ತ ಕರ್ನಾಟಕ’ದ ದೃಢ ಧ್ಯೇಯದೊಂದಿಗೆ ರಾಷ್ಟ್ರಾದ್ಯಂತ ಮಾದರಿಯಾದ ‘ಅನ್ನಭಾಗ್ಯ’ ಯೋಜನೆಯ ಮೂಲಕ ರಾಜ್ಯದ ಜನರ ಹೊಟ್ಟೆ ತಣಿಸಿ ‘ಅನ್ನರಾಮಯ್ಯ’ ಎಂದೇ ಜನರ ಹೃದಯದಲ್ಲಿ ನೆಲೆಯಾದವರು ಅವರು. ಹಿಂದೆ ನಾನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವನಾಗಿದ್ದಾಗ, ನನ್ನ ಮೇಲೆ ನಂಬಿಕೆಯಿಟ್ಟು ಈ ಐತಿಹಾಸಿಕ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ಸೌಭಾಗ್ಯವನ್ನು ಅವರು ನನಗೆ ನೀಡಿದ್ದರು.

ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆಗಳು ಸಕಾಲದಲ್ಲಿ ದೊರೆಯಬೇಕೆಂಬ ನಿಟ್ಟಿನಲ್ಲಿ, ದೇಶದಲ್ಲೇ ಪ್ರಪ್ರಥಮ ಬಾರಿಗೆ ನಮ್ಮ ಆರೋಗ್ಯ ಇಲಾಖೆ ತಂದ ಹೆಮ್ಮೆಯ ‘108 ಕೇಂದ್ರೀಕೃತ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್’ ಅನ್ನು ಇತ್ತೀಚೆಗಷ್ಟೇ ಅವರು ಉದ್ಘಾಟಿಸಿದ್ದರು. ಅದುವೇ ಅವರು ಮುಖ್ಯಮಂತ್ರಿಯಾಗಿ ಭಾಗವಹಿಸಿದ ಕೊನೆಯ ಅಧಿಕೃತ ಸಾರ್ವಜನಿಕ ಕಾರ್ಯಕ್ರಮವಾಗಿತ್ತು ಎಂಬುದು ಈಗ ಭಾವನಾತ್ಮಕವಾಗಿ ಕಾಡುತ್ತಿದೆ. ಕೊನೆಯ ಕ್ಷಣದವರೆಗೂ ಜನಸಾಮಾನ್ಯರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಮಿಡಿದ ಅವರ ಆಡಳಿತ ಎಂದಿಗೂ ಸ್ಮರಣೀಯ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೋಮುವಾದಿಗಳ ವಿರುದ್ಧ ಎಂದೂ ರಾಜಿ ಮಾಡಿಕೊಳ್ಳದ ಅವರ ಗಟ್ಟಿ ನಿಲುವುಗಳು ಹಾಗೂ ಜನಾನುರಾಗಿಯಾಗಿ ‘ಪಂಚ ಗ್ಯಾರಂಟಿ’ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕಾರ್ಯವೈಖರಿ, ಅವರ ‘ನುಡಿದಂತೆ ನಡೆಯುವ’ ಗುಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವಿರೋಧಪಕ್ಷಗಳು ರಾಜಕೀಯ ದುರುದ್ದೇಶದಿಂದ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ ಎಂದು ಮಾಡುತ್ತಿರುವ ಆರೋಪಗಳೆಲ್ಲ ಕೇವಲ ಸತ್ಯಕ್ಕೆ ದೂರವಾದ ರಾಜಕೀಯ ಗಿಮಿಕ್ ಅಷ್ಟೇ ಹೊರತು ಅದರಲ್ಲಿ ಯಾವುದೇ ವಾಸ್ತವವಿಲ್ಲ. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ನೈಜ ಸಮಾಜವಾದಿಯಾಗಿ ಬದುಕಿ ತೋರಿಸಿದ ಅವರ ನಡೆ ನಮಗೆಲ್ಲರಿಗೂ ಸದಾ ಮಾದರಿ ಎಂದು ಸಚಿವ ದಿನೇಶ್ ಗುಂಡೂರಾವ್  ಹೇಳಿದರು.

ಕರ್ನಾಟಕದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ನ್ಯಾಯದ ಆಡಳಿತ ನಿರಂತರವಾಗಿ ಮುಂದುವರಿಯಬೇಕಾದರೆ ಮಾನ್ಯ ಸಿದ್ದರಾಮಯ್ಯ ಅವರು ರಾಜೀನಾಮೆಯ ನಂತರವೂ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಬೇಕು ಎಂಬುದು ನನ್ನ ಆಶಯವಾಗಿದೆ. ಇಂತಹ ಶ್ರೇಷ್ಠ ಜನನಾಯಕರೊಂದಿಗೆ ಕೆಲಸ ಮಾಡಲು ನನಗೆ ಸಿಕ್ಕ ಅವಕಾಶ ನನ್ನ ಸೌಭಾಗ್ಯ. ಆ ಒಡನಾಟ ಮತ್ತು ಮಾರ್ಗದರ್ಶನಕ್ಕಾಗಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾವು ಸದಾ ನಿಮ್ಮೊಂದಿಗಿದ್ದೇವೆ ಸರ್, ರಾಜ್ಯದ ಜನರಿಗಾಗಿ ನಿಮ್ಮ ಸೇವೆ ಹೀಗೇ ಮುಂದುವರಿಯಲಿ ಎಂದು ಸಚಿವ ದಿನೇಶ್ ಗುಂಡೂರಾವ್  ಹೇಳಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular