ರಾಹುಲ್ ಗಾಂಧಿ ಮಂಗಳವಾರ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರು ರಾಹುಲ್ ಗಾಂಧಿ ಸ್ವಾಗತಿಸಿದ್ದರು.
ಕೇವಲ ರಾಹುಲ್ ಗಾಂಧಿ ಸ್ವಾಗತ ಮಾಡಲು ಮೈಸೂರಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ, ಜೆಡಿಎಸ್ ಗರಂ ಆಗಿವೆ. ಟೀಕೆಗಳನ್ನು ಮಾಡಿದ್ದು, ಕಟುವಾದ ಶಬ್ದಗಳಿಂದ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ.
ರಾಹುಲ್ ಗಾಂಧಿ ಭೇಟಿ ಬಗ್ಗ ಸಿದ್ದರಾಮಯ್ಯ ಪೋಸ್ಟ್ ಹಾಕಿ, ‘ತಮಿಳುನಾಡಿಗೆ ತೆರಳುವ ಮಾರ್ಗಮಧ್ಯೆ ಮೈಸೂರಿಗೆ ಆಗಮಿಸಿದ ನಮ್ಮ ಹೆಮ್ಮೆಯ ನಾಯಕರಾದ ರಾಹುಲ್ ಗಾಂಧಿಯವರನ್ನು ರಾಜ್ಯಕ್ಕೆ ಪ್ರೀತಿಯಿಂದ ಬರಮಾಡಿಕೊಂಡು, ಶುಭ ಹಾರೈಸಿದೆ’ ಎಂದು ಹೇಳಿದ್ದರು.
ರಾಜಕೀಯ ಚರ್ಚೆ ನಡೆದಿಲ್ಲ: ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ದರಾಮಯ್ಯ ಮಾತನಾಡಿ, “ರಾಹುಲ್ ಗಾಂಧಿಯವರು ಗೂಡ್ಲೂರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದು, ಮಾರ್ಗ ಮಧ್ಯೆ ಭೇಟಿ ಮಾಡಿದ್ದೇನೆ. ಈ ಸಂದರ್ಭದಲ್ಲಿ ಅವರ ಜೊತೆ ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿಲ್ಲ. ಸಂಜೆ ಅವರು ದೆಹಲಿಗೆ ತೆರಳುವಾಗಲೂ ಬೀಳ್ಕೊಡಲಾಗುವುದು” ಎಂದು ಹೇಳಿದ್ದರು.
“ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಶಾಸಕರಿಗೆ ಈ ಕುರಿತು ಮಾಹಿತಿ ಇರುವುದಿಲ್ಲ. ಈ ವಿಚಾರದಲ್ಲಿ ನಾನು ಅಥವಾ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಬೇಕು” ಎಂದು ತಿಳಿಸಿದ್ದರು.
“ಅಧಿಕಾರ ಹಂಚಿಕೆ ವಿಚಾರದಲ್ಲಿ ಅಂತಿಮವಾಗಿ ಪಕ್ಷದ ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ನಮ್ಮ ಪಕ್ಷದ ಶಾಸಕರಿಗಿಂತ ಮಾಧ್ಯಮಗಳು ಹೆಚ್ಚು ಆಸಕ್ತಿ ತೋರುತ್ತಿವೆ” ಎಂದರು.
ಆರ್.ಅಶೋಕ ಟೀಕೆ: ರಾಹುಲ್ ಗಾಂಧಿ ಸ್ವಾಗತಕ್ಕೆ ಬೆಂಗಳೂರಿನಿಂದ ಮೈಸೂರು ತನಕ ಹೋದ ಸಿಎಂ, ಡಿಸಿಎಂ ವಿರುದ್ಧ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, “ಕರ್ನಾಟಕದ ಹಿತಕ್ಕಿಂತ… ಹೈಕಮಾಂಡ್ ಹಂಗೇ ಹೆಚ್ಚಾಯಿತೇ?” ಎಂದು ಪ್ರಶ್ನೆ ಮಾಡಿದ್ದಾರೆ.
“ಇಂದು ವಿಶ್ವದ ಬಲಿಷ್ಠ ಆರ್ಥಿಕ ಶಕ್ತಿಗಳಲ್ಲಿ ಒಂದಾದ ಜರ್ಮನಿ ದೇಶದ ಚಾನ್ಸಲರ್ ನಮ್ಮ ಕರ್ನಾಟಕಕ್ಕೆ ಆಗಮಿಸಿದರು. ಯಾವುದೇ ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿ, ಇಂತಹ ಜಾಗತಿಕ ನಾಯಕರನ್ನು ಬರಮಾಡಿಕೊಂಡು, ಈ ಭೇಟಿಯನ್ನ ರಾಜ್ಯದ ಏಳಿಗೆಗಾಗಿ ಬಳಸಿಕೊಳ್ಳುತ್ತಿದ್ದರು. ನಮ್ಮ ರಾಜ್ಯದ ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ವೃದ್ಧಿಸಿಕೊಳ್ಳಲು ಸಿಕ್ಕಿರುವ ಒಂದು ಸುವರ್ಣ ಅವಕಾಶ ಎಂದು ಈ ಜಾಗತಿಕ ನಾಯಕರ ಭೇಟಿಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರು. ಆದರೆ ನಮ್ಮ ರಾಜ್ಯದ ದುರಂತ ನೋಡಿ…” ಎಂದು ಅಶೋಕ್ ಹೇಳಿದ್ದಾರೆ.
“ಒಂದೆಡೆ ಜರ್ಮನಿಯ ಚಾನ್ಸಲರ್ ಬೆಂಗಳೂರಿಗೆ ಆಗಮಿಸುತ್ತಿದ್ದರೆ, ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಊಟಿಗೆ ಹೋಗುವ ದಾರಿಯಲ್ಲಿ ಸುಮ್ಮನೆ ಹಾದುಹೋಗುತ್ತಿದ್ದ ಅವರನ್ನು ಸ್ವಾಗತಿಸಲು ಮೈಸೂರಿನಲ್ಲಿ ಸಾಲುಗಟ್ಟಿ ನಿಂತಿದ್ದರು!. ಇದು ಕೇವಲ ಶಿಷ್ಟಾಚಾರದ ಲೋಪವಲ್ಲ, ಕರ್ನಾಟಕದ ಹಿತಾಸಕ್ತಿಗೆ ಮಾಡಿದ ದ್ರೋಹ” ಎಂದು ಹೇಳಿದ್ದಾರೆ.
- ವಿಶ್ವದ ಆರ್ಥಿಕ ಶಕ್ತಿಯ ಸ್ವಾಗತಕ್ಕೆ ಸಿಗಲಿಲ್ಲ ‘ಆದ್ಯತೆ’.
- ಹೈಕಮಾಂಡ್ ಮೆಚ್ಚಿಸುವ ಗುಲಾಮಗಿರಿಗೆ ಸಿಕ್ಕಿತು ‘ಪ್ರಾಮುಖ್ಯತೆ’.
“ರಾಜ್ಯದ ಅಭಿವೃದ್ಧಿಗಿಂತ ರಾಜಕೀಯ ನಿಷ್ಠೆಯೇ ದೊಡ್ಡದಾದಾಗ, ಕನ್ನಡಿಗರ ಭವಿಷ್ಯಕ್ಕೆ ಕುತ್ತು ಬರುವುದು ಖಚಿತ. ಅಧಿಕಾರದ ದಾಹಕ್ಕಾಗಿ ರಾಜ್ಯಕ್ಕೆ ಒಲಿಯಬಹುದಾದ ಅವಕಾಶಗಳನ್ನೇ ಬಲಿಕೊಟ್ಟ ಈ ಸರ್ಕಾರಕ್ಕೆ ಕರ್ನಾಟಕದ ಬಗ್ಗೆ, ಕನ್ನಡಿಗರ ಎಳ್ಳಷ್ಟೂ ಕಾಳಜಿ ಇಲ್ಲ ಎಂಬುದು ಸಾಬೀತಾಗಿದೆ” ಎಂದು ಟೀಕಿಸಿದರು.
“ಕನ್ನಡಿಗರಿಗೆ ಬೇಕಾಗಿರುವುದು ಕರ್ನಾಟಕದ ಬಗ್ಗೆ ಬದ್ಧತೆ, ಇಚ್ಛಾಶಕ್ತಿ ಇರುವ ನಾಯಕರೇ ಹೊರತು, ಕುರ್ಚಿ ಉಳಿಸಿಕೊಳ್ಳಲು ಅಥವಾ ಗಿಟ್ಟಿಸಿಕೊಳ್ಳಲು ತಮ್ಮ ಜವಾಬ್ದಾರಿಯನ್ನೇ, ಕರ್ತವ್ಯವನ್ನೇ ಮರೆತು ಹೈಕಮಾಂಡ್ ಮುಂದೆ ಕೈಕಟ್ಟಿ ನಿಲ್ಲುವ ಗುಲಾಮರಲ್ಲ!” ಎಂದರು.
ಸ್ವಾಗತ ಕೋರಿದ ಎಂ.ಬಿ.ಪಾಟೀಲ್: ಜರ್ಮನಿಯ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಂಗಳವಾರ ಸಂಜೆ ಆಗಮಿಸಿದರು. ರಾಜ್ಯದ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಸ್ವಾಗತ ಮಾಡಿದರು.
‘ರಾಜ್ಯಕ್ಕೆ ಆಗಮಿಸಿರುವ ಜರ್ಮನಿಯ ಫೆಡರಲ್ ಚಾನ್ಸೆಲರ್ ಗೌರವಾನ್ವಿತ ಶ್ರೀ ಫ್ರೆಡ್ರಿಕ್ ಮೆರ್ಜ್ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು’ ಎಂದು ಸಚಿವರು ಪೋಸ್ಟ್ ಹಾಕಿದ್ದಾರೆ.
‘ಕರ್ನಾಟಕ–ಜರ್ಮನಿ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿ, ಸುಸ್ಥಿರ ಬೆಳವಣಿಗೆಯ ದಾರಿಯಲ್ಲಿ ನಮ್ಮ ಸಹಕಾರವನ್ನು ಗಾಢಗೊಳಿಸಲು ನಾವು ಉತ್ಸುಕರಾಗಿದ್ದೇವೆ’ ಎಂದು ಹೇಳಿದ್ದಾರೆ.

