ನಿನ್ನೆ ( ಮೇ 4 ) ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರಬಿದ್ದಿದ್ದು, ಪಶ್ಚಿಮ ಬಂಗಾಳ, ಪುದುಚೆರಿ ಹಾಗೂ ಅಸ್ಸಾಂನಲ್ಲಿ ಕಮಲ ಅರಳಿದ್ದು, ಕೇರಳಂನಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆದ್ದು ಬೀಗಿದೆ.
ಇನ್ನು ತಮಿಳುನಾಡಿನಲ್ಲಿ ಸ್ಪಷ್ಟ ಬಹುಮತ ಬಾರದಿದ್ದರೂ ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರ ಸ್ಥಾಪಿಸಲು ಇನ್ನೂ 10 ಸೀಟುಗಳ ಅನಿವಾರ್ಯತೆಯಲ್ಲಿದೆ.
ಎರಡು ವರ್ಷಗಳ ಹಿಂದಷ್ಟೇ ಪಕ್ಷ ಸ್ಥಾಪಿಸಿ ಈ ಮಟ್ಟಗಿನ ಗೆಲುವು ಸಾಧಿಸಿದ ಟಿವಿಕೆ ಹಿಂದೆ ವಿಜಯ್ ಸ್ಟಾರ್‌ಡಂ ಜತೆಗೆ ಪಕ್ಷ ನೀಡಿದ ಉಚಿತ ಭಾಗ್ಯಗಳ ಸರಮಾಲೆಯೇ ಇದೆ. ಹೀಗೆ ಅನಿರೀಕ್ಷಿತ ಗೆಲುವು ಕಂಡ ಟಿವಿಕೆ ಕುರಿತು ನೆರೆ ರಾಜ್ಯಗಳ ನಾಯಕರೂ ಸಹ ಮಾತನಾಡುತ್ತಿದ್ದು, ಇಂದು ( ಮೇ 5 ) ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸುದ್ದಿಗೋಷ್ಟಿಯಲ್ಲಿಯೂ ಸಹ ಟಿವಿಕೆ ಬಗ್ಗೆ ಹೇಳಿಕೆ ಕೇಳಿಬಂದಿದೆ.
ಪಂಚ ರಾಜ್ಯಗಳ ಚುನಾವಣೆಗಳ ಫಲಿತಾಂಶದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ‘ಬಹುಶಃ ನಮಗೆ ತಮಿಳುನಾಡಿಲ್ಲಿ ಆಶ್ಚರ್ಯ ತಂದಿದೆ. ಬಹುತೇಕ ಯುವ ಜನತೆ ಸಿನಿಮಾ ಕಲಾವಿದ ಮಿಸ್ಟರ್ ವಿಜಯನ್‌ಗೆ ವೋಟ್ ಹಾಕಿದ್ದಾರೆ. ಮಿಸ್ಟರ್ ವಿಜಯ.. ಅವನ ಹೆಸರೇನು, ಪೂರ್ತಿ ಹೆಸರೇನು? ಜೋಸೆಫ್ ವಿಜಯ್’ ಎಂದರು. ಈ ವೇಳೆ ಪತ್ರಕರ್ತರೊಬ್ಬರು ‘ಜೋಸೆಫ್ ವಿಜಯ್ ಚಂದ್ರಶೇಖರನ್’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ಜೋಸೆಫ್ ವಿಜಯ್ ಅಂತ ನನಗೆ ಗೊತ್ತಿರೋದು, ಚಂದ್ರಶೇಖರನ್ ಅಂತ ನೀನು ಸೇರಿಸುತ್ತಿದ್ದೀಯ, ಜೋಸೆಫ್ ವಿಜಯ್ ಅಂತ ಬರೆಯಪ್ಪ’ ಎಂದು ಕಾಲೆಳೆದರು. ಮುಂದುವರಿದು ಮಾತನಾಡಿದ ಸಿದ್ದರಾಮಯ್ಯ ‘ತಮಿಳುನಾಡಿನ ಯುವ ಜನತೆ ಬದಲಾವಣೆಯನ್ನು ಬಯಸಿದ್ದರು. ಅದಕ್ಕಾಗಿ ಅವರು ವಿಜಯ್‌ಗೆ ಮತ ಹಾಕಿದ್ದಾರೆ ಎನಿಸುತ್ತದೆ. ಅದಕ್ಕೆ ಅನು ಹೇಳಿದ್ದು ಇದೊಂದು ಅಚ್ಚರಿಯ ಫಲಿತಾಂಶ’ ಎಂದರು.

