ರಾಜ್ಯದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಅಭಾವವನ್ನು ತಗ್ಗಿಸಲು ಸರ್ಕಾರವು ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿದ್ದು, ಮಾರ್ಚ್ 2026 ರಿಂದ ಇಂದಿನವರೆಗೆ ಒಟ್ಟು ₹208.67 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ತುರ್ತು ಕಾಮಗಾರಿಗಳಿಗಾಗಿ ಇಂದು ಪುನಃ ₹72 ಕೋಟಿಗಳ ಹೆಚ್ಚುವರಿ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಪ್ರಸಕ್ತ ಸಾಲಿನ ಹೊಸ ಕಾಮಗಾರಿಗಳ ಜೊತೆಗೆ, ಈ ಹಿಂದೆ ಟಾಸ್ಕ್ ಫೋರ್ಸ್ ಸಮಿತಿಯಿಂದ ಅನುಮೋದನೆ ಪಡೆದು ಪೂರ್ಣಗೊಂಡಿದ್ದ ಕಾಮಗಾರಿಗಳ ಬಾಕಿ ಪಾವತಿಗಾಗಿ ವಿನಿಯೋಗಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೇಸಿಗೆಯ ತೀವ್ರತೆಯಿಂದ ಅಂತರ್ಜಲ ಮಟ್ಟ ಕುಸಿದು ಕೊಳವೆಬಾವಿಗಳ ಇಳುವರಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತಗಳು ಲಭ್ಯವಿರುವ ಕೊಳವೆಬಾವಿಗಳನ್ನು ಫ್ಲಶಿಂಗ್ ಮಾಡಲು ಮತ್ತು ಆಳ ಹೆಚ್ಚಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ನೀರಿನ ಮೂಲಗಳಿಲ್ಲದ ಕಡೆಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲು ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅನುಮತಿ ನೀಡಲಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಭೂವಿಜ್ಞಾನಿಗಳ ವರದಿ ಆಧರಿಸಿ ಹೊಸ ಕೊಳವೆಬಾವಿ ಕೊರೆಯಲು ಹಾಗೂ ಪಂಪಿಂಗ್ ಯಂತ್ರಗಳನ್ನು ಅಳವಡಿಸಲು ಸೂಚಿಸಲಾಗಿದೆ.
ಈ ಎಲ್ಲ ಕಾಮಗಾರಿಗಳನ್ನು ಕೈಗೊಳ್ಳುವಾಗ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ (KTPP Act) ಮತ್ತು ಆರ್ಥಿಕ ಸಂಹಿತೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾಮಗಾರಿಗಳ ಭೌತಿಕ ಪ್ರಗತಿಯನ್ನು ಆಧರಿಸಿ ಮಾತ್ರ ಬಿಲ್‌ಗಳನ್ನು ಪಾವತಿಸಲು ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯಿಂದ ಕಡ್ಡಾಯವಾಗಿ ಅನುಮೋದನೆ ಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಬೃಹತ್ ಅನುದಾನದಿಂದ ರಾಜ್ಯದ 31 ಜಿಲ್ಲೆಗಳ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ತಕ್ಷಣದ ಪರಿಹಾರ ದೊರೆಯಲಿದೆ ಎಂಬ ವಿಶ್ವಾಸವಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

