ಬೆಂಗಳೂರು- ನಾಲ್ಕು ದಶಕಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದು ಸಕಲ ಭೋಗ-ಭಾಗ್ಯಗಳನ್ನು ಅನುಭವಿಸಿದ ಹಿರಿಯ ನಾಯಕರಿಗೆ ಅಧಿಕಾರ ಕೈತಪ್ಪಿದ ಬಳಿಕ ಹಠಾತ್ ಜ್ಞಾನೋದಯವಾಗಿರುವ ಪ್ರಸಂಗವು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ ಹಾಗೂ ವಾಕ್ಸಮರಕ್ಕೆ ಕಾರಣವಾಗಿದೆ.
ಈ ಕುರಿತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ ಅವರು ತೀವ್ರವಾಗಿ ಟೀಕಿಸಿದ್ದು, ಇದು ಆತ್ಮಾವಲೋಕನವಲ್ಲ, ಕೇವಲ “ಅಭಾವ ವೈರಾಗ್ಯ” ಎಂದು ಕಿಡಿಕಾರಿದ್ದಾರೆ.
ಸುದೀರ್ಘ 40 ವರ್ಷಗಳ ಕಾಲ ಶಾಸಕರಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಹಾಗೂ ಎರಡೆರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿ, ಬಳಿಕ ಅದೇ ಅಧಿಕಾರವನ್ನು ಮುಂದಿನ ಪೀಳಿಗೆಗೆ ಧಾರೆರೆದು ಕೊಟ್ಟ ನಾಯಕರ ವೈರಾಗ್ಯದ ಮಾತುಗಳು ಈಗ ಚರ್ಚೆಗೆ ಬಂದಿವೆ.
ಚುನಾವಣೆ ಕಲುಷಿತ ಎಂಬ ಹೇಳಿಕೆ ಅಚ್ಚರಿ
ಚುನಾವಣೆಗಳು ಕಲುಷಿತಗೊಂಡಿವೆ, ಹಿಂದೆ ಜನರು ಹಣ ಕೊಡದೆ ಗೆಲ್ಲಿಸುತ್ತಿದ್ದರು ಆದರೆ ಈಗ ನಾವೇ ಹಣ ಕೊಡಬೇಕಾಗಿದೆ ಎಂಬ ಕಾರಣ ನೀಡಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿರುವ ಹಿರಿಯ ನಾಯಕರ ಹೇಳಿಕೆ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಭೋಗದ ವಸ್ತು ಸಿಕ್ಕಾಗ ಅನುಭವಿಸಿ, ಅದು ಕೈತಪ್ಪಿದಾಗ ‘ಅದೆಲ್ಲಾ ಮಾಯೆ, ನಶ್ವರ’ ಎಂದು ತತ್ವಜ್ಞಾನ ಹೇಳುವುದೇ ಅಭಾವ ವೈರಾಗ್ಯ ಎಂದು ಆರ್. ಅಶೋಕ ಅವರು ವ್ಯಾಖ್ಯಾನಿಸಿದ್ದಾರೆ.
ಆರ್. ಅಶೋಕ ಅವರ ಕಟು ಪ್ರಶ್ನೆಗಳು
ಆರ್. ಅಶೋಕ ಅವರ ಕಟು ಪ್ರಶ್ನೆಗಳು
ವಿಪಕ್ಷ ನಾಯಕ ಆರ್. ಅಶೋಕ ಅವರು ಮಾಜಿ ಮುಖ್ಯಮಂತ್ರಿಯವರ (ಪರೋಕ್ಷವಾಗಿ ಸಿದ್ದರಾಮಯ್ಯ) ನಡೆಯನ್ನು ತರಾಟೆಗೆ ತೆಗೆದುಕೊಂಡು ಕೆಲವು ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ನಾಲ್ಕು ದಶಕಗಳ ಕಾಲ ಸಿಸ್ಟಮ್‌ನ ಒಳಗೇ ಇದ್ದು, ವ್ಯವಸ್ಥೆಯನ್ನು ಸುಧಾರಿಸಲು ನೀವು ಏನು ಮಾಡಿದ್ದೀರಿ?ನಲ್ವತ್ತು ವರ್ಷ ಅಧಿಕಾರದಲ್ಲಿದ್ದಾಗ ಕೈಯಲ್ಲಿದ್ದ ಅಧಿಕಾರವನ್ನು ಬಳಸದೆ, ಈಗ ದೊಡ್ಡ ವಿಚಾರವಾದಿಯಂತೆ ಉಪದೇಶ ಕೊಡುವುದು ಎಷ್ಟು ವಿಶ್ವಾಸಾರ್ಹ?ಅಧಿಕಾರದಲ್ಲಿದ್ದಾಗ ಮೌನವಾಗಿದ್ದು, ಅಧಿಕಾರ ಕಳೆದುಕೊಂಡ ಮೇಲೆ ‘ವ್ಯವಸ್ಥೆ ಕೆಟ್ಟಿದೆ’ ಎಂದು ಪ್ರವಚನ ಮಾಡುವುದು ಆತ್ಮಾವಲೋಕನವೇ ಅಥವಾ ‘ಆತ್ಮಸಾಂತ್ವನವೇ’? ಎಂದು ಪ್ರಶ್ನೆಸಿದ್ದಾರೆ.
“ದ್ರಾಕ್ಷಿ ಹಣ್ಣು ಕೈಗೆ ಸಿಕ್ಕುವವರೆಗೂ ಸಿಹಿ, ಸಿಗದಂತಾದಾಗ ಆ ದ್ರಾಕ್ಷಿ ಹುಳಿ ಎನ್ನುವ ಗಾದೆಯಂತೆ, ರಾಜಕಾರಣದಲ್ಲೂ ಅಧಿಕಾರ ಸಿಗುವವರೆಗೂ ಅದು ‘ಸೇವೆ’, ಸಿಗದಂತಾದ ಮೇಲೆ ಅದೇ ರಾಜಕಾರಣ ‘ಕಲುಷಿತ’.” ಎಂದು ಟೀಕಿಸಿದ್ದಾರೆ.
ವಿಶ್ಲೇಷಕರ ಟೀಕೆ ಮತ್ತು ಡಬಲ್ ಸ್ಟ್ಯಾಂಡರ್ಡ್ ಆರೋಪ
ಡಬಲ್ ಸ್ಟ್ಯಾಂಡರ್ಡ್ಸ್ ಆರೋಪ: ಅಧಿಕಾರದಲ್ಲಿದ್ದಾಗ ಅಭ್ಯರ್ಥಿಗಳಿಗೆ ಟಿಕೆಟ್ ಹಂಚುವಾಗ, ಮಂತ್ರಿಗಿರಿ ನೀಡುವಾಗ ಅಥವಾ ಆಡಳಿತ ಚುಕ್ಕಾಣಿ ಹಿಡಿದಿದ್ದಾಗ ಎಂದಿಗೂ ನೆನಪಾಗದ “ಚುನಾವಣಾ ಸುಧಾರಣೆ”, ಈಗ ಅಧಿಕಾರ ಹೋದ ಮೇಲೆಯೇ ಪತ್ರಿಕೆಗಳಲ್ಲಿ ಲೇಖನ ಬರೆಯುವ ಮೂಲಕ ನೆನಪಾಗಿರುವುದು ರಾಜಕೀಯ ಪ್ರಹಸನ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.
ರಾಜಕೀಯ ಅಸ್ತಿತ್ವದ ನಾಟಕ: ಅಧಿಕಾರ ಕಳೆದುಕೊಂಡ ತಕ್ಷಣ ನಾಯಕರು ಪ್ರದರ್ಶಿಸುವ ಈ ವೈರಾಗ್ಯದ ಸೋಗು ಕೇವಲ ರಾಜಕೀಯ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹಾಗೂ ಜನರ ಸಹಾನುಭೂತಿ ಗಿಟ್ಟಿಸಲು ನಡೆಸುವ ನಾಟಕೀಯ ಪ್ರವಚನಗಳಷ್ಟೇ ಎಂಬ ಅಭಿಪ್ರಾಯ ರಾಜಕೀಯ ವಿಶ್ಲೇಷಕರಿಂದ ಕೇಳಿಬರುತ್ತಿದೆ.

