ಬಾಗಲಕೋಟೆ: ನೂತನ ಸಚಿವ ವಿಜಯಾನಂದ ಕಾಶಪ್ಪನವರ್ ಅವರಿಗೆ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಪ್ರಸಿದ್ಧ ಸಿದ್ದನಕೊಳ್ಳ ಶ್ರೀಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ
ಸಚಿವ ವಿಜಯಾನಂದ ಕಾಶಪ್ಪನವರ್ ಅವರು ಸಿದ್ದನಕೊಳ್ಳ ಶ್ರೀಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಅವರು ಆಶಿರ್ವಚನ ನೀಡಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವಂತಹ ಮಾರ್ಮಿಕ ಭವಿಷ್ಯ ನುಡಿದಿದ್ದಾರೆ.
ನಿನ್ನ ಸಿಟ್ಟನ್ನು ಬಿಟ್ಟರೆ ಮುಂದೆ ರಾಜ್ಯದ ಮುಖ್ಯಮಂತ್ರಿ ಆಗುತ್ತೀಯಾ ಎಂದು ಭವಿಷ್ಯ ನುಡಿದಿದ್ದಾರೆ. ಕಳೆದ 2023ರಲ್ಲಿ ನೀನು ಶಾಸಕನಾಗಿ ಸಚಿವನಾಗುತ್ತೀಯಾ ಎಂದು ಭವಿಷ್ಯ ನುಡಿದಿದ್ದೆ. ಸಿದ್ದಪ್ಪಜ್ಜನ ಗದ್ದುಗೆಯ ಮುಂದೆ ನೀನು ಮಾಡಿದ ಪ್ರಾರ್ಥನೆ ಫಲಿಸಿದ್ದು, 2023ರಲ್ಲಿ ನುಡಿದ ಭವಿಷ್ಯ 2026ರಲ್ಲಿ ನಿಜವಾಗಿದೆ ಎಂದು ಸ್ವಾಮೀಜಿ ನುಡಿದರು.
ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ಅಲ್ಲ ಎನ್ನುವ ನಿನ್ನ ಮಾತು ನನಗೆ ತುಂಬಾ ಇಷ್ಟವಾಯಿತು. ‘ನಿನ್ನಲ್ಲಿರುವ ಸಿಟ್ಟನ್ನು ಬಿಟ್ಟರೆ ಮುಂದೆ ಸಿಎಂ ಆಗ್ತಿಯಾ. ಆದರೆ ಸಿಎಂ ಆಗ್ತಿ ಅಂದರೆ ಮಂದಿ ಸುಮ್ಮನಿರಲ್ಲ, ಎಚ್ಚರಿಕೆಯಿಂದಿರು’ ಎಂದು ಮಾರ್ಮಿಕವಾಗಿ ಹೇಳಿದರು. ಸಿದ್ದನಕೊಳ್ಳ ಶ್ರೀಗಳು ನುಡಿದಿರುವ ಈ ಭವಿಷ್ಯ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

