ಶಿವಮೊಗ್ಗ: ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗೆಂದು ದಾಖಲಾಗಿದ್ದ ಯುವತಿ ಒಂದೇ ದಿನಕ್ಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಶಿಕಾರಿಪುರದ ಈಸೂರಿನ ನಿವಾಸಿ ನೇಹಾ (17) ಮೃತ ಯುವತಿ. ಯುವತಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. 8 ತಿಂಗಳ ಹಿಂದೆ ಕಾಲೇಜಿಗೆ ಹೋಗುವಾಗ ಹಾವು ನೋಡಿ ನೇಹಾ ಬೆಚ್ಚಿಬಿದ್ದಿದ್ದಲಂತೆ. ಅಂದಿನಿಂದ ಓದುವ ವಿಚಾರದಲ್ಲಿಯೂ ಮಂಕಾಗಿದ್ದ ನೇಹಾ ಒಮ್ಮೆ ಬ್ಲೇಡ್ನಿಂದ ಕೈ ಸಹ ಕೊಯ್ದುಕೊಂಡಿದ್ದಳಂತೆ. ಇದೇ ಕಾರಣದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಕೂಡ ಬರೆದಿರಲಿಲ್ಲ.
3 ದಿನಗಳ ಹಿಂದೆ ಪೋಷಕರು ನೇಹಾಳನ್ನು ಖಾಸಗಿ ನರ್ಸಿಂಗ್ ಹೋಂಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಈ ನಡುವೆ ಶಿವಮೊಗ್ಗದ ಮಾನಸಧಾರ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರದದವರು ನೇಹಾಳನ್ನು ಬೇಸಿಗೆ ಶಿಬಿರಕ್ಕೆ ಸೇರಿಸಿದರೆ ಗುಣಮುಖಳಾಗುತ್ತಾಳೆ ಎಂದಿದ್ದರಂತೆ. ಹೀಗಾಗಿ ಎರಡು ದಿನಗಳ ಹಿಂದೆ ಮಧ್ಯಾಹ್ನ 3 ಗಂಟೆಗೆ ಪುನರ್ ವಸತಿ ಕೇಂದ್ರಕ್ಕೆ ನೇಹಾಳನ್ನ ಕರೆತಂದು ಪೋಷಕರು ಸೇರಿಸಿದ್ದರು. ಆದರೆ ಪುನರ್ವಸತಿ ಕೇಂದ್ರಕ್ಕೆ ಸೇರಿದ್ದ ಒಂದೇ ದಿನದಲ್ಲಿ ನೇಹಾ ಸಾವಿನ ಸುದ್ದಿ ಪೋಷಕರಿಗೆ ಬಂದಿದೆ.
ಪುನರ್ವಸತಿ ಕೇಂದ್ರದವರು ಪೋಷಕರಿಗೆ ಕರೆ ಮಾಡಿ ಸಾವರ್ ಲೈನ್ ರಸ್ತೆಯಲ್ಲಿರುವ ಖಾಸಗಿ ನರ್ಸಿಂಗ್ ಹೋಂಗೆ ಬನ್ನಿ. ನೇಹಾ ಮತ್ತೆ ಕೈ ಕೊಯ್ದುಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಕುಟುಂಬ ನರ್ಸಿಂಗ್ ಹೋಂಗೆ ಬಂದು ನೋಡುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು.
ಪುನರ್ ವಸತಿ ಕೇಂದ್ರದ ವೈದ್ಯರು, ಸಿಬ್ಬಮ್ದಿಗಳು ಜವಾಬ್ದಾರಿ ತೆಗೆದುಕೊಂಡಿದ್ದರು. ಬೇಸಿಗೆ ಶಿಬಿರದಲ್ಲಿ ಸಮಾನ ಮನಸ್ಕರರೊಂದಿಗೆ ನೇಹಾಳನ್ನ ಬಿಡಲಾಗುವುದು ಎಂದಿದ್ದ ಆಸ್ಪತ್ರೆಯವರು ಮಾನಸಿಕ ರೋಗಿಗಳ ಜೊತೆ ಆಕೆಯನ್ನು ಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ. ಅಲ್ಲದೆ ಪುನರ್ ವಸತಿ ಕೇಂದ್ರದ ಕೊಠಡಿಯಲ್ಲಿಯೇ ನೇಹಾ ವೇಲ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಗಂಭೀರ ಆರೋಪ ಮಾಡಿದ್ದಾರೆ. ಒಟ್ಟಾರೆ ನೇಹಾ ಸಾವಿನ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದ್ದು, ತನಿಖೆ ಬಳಿಕವೇ ಸತ್ಯಾಸತ್ಯತೆ ತಿಳಿದು ಬರಬೇಕಿದೆ.

