HomeLatest Newsಐರ್ಲೆಂಡ್ ವಿರುದ್ಧ ಹೀನಾಯ ಸೋಲುಂಡ ಭಾರತ; ತಾನೂ ಸೇರಿದಂತೆ ಸೋಲಿಗೆ ಕಾರಣರಾದವರ ಹೆಸರು ಹೇಳದೇ ಆ...

ಐರ್ಲೆಂಡ್ ವಿರುದ್ಧ ಹೀನಾಯ ಸೋಲುಂಡ ಭಾರತ; ತಾನೂ ಸೇರಿದಂತೆ ಸೋಲಿಗೆ ಕಾರಣರಾದವರ ಹೆಸರು ಹೇಳದೇ ಆ ಇಬ್ಬರನ್ನು ಹೊಗಳಿ ಜಾರಿಕೊಂಡ ನಾಯಕ ಶ್ರೇಯಸ್!

ನಿನ್ನೆ ( ಜೂನ್ 26 ) ಬೆಲ್‌ಫಾಸ್ಟ್‌ನ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್‌ನಲ್ಲಿ ನಡೆದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಐರ್ಲೆಂಡ್ ಭಾರತವನ್ನು ಮಣಿಸಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯವನ್ನು ಗೆದ್ದ ಐತಿಹಾಸಿಕ ದಾಖಲೆ ಬರೆದಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆರಿಸಿಕೊಂಡು ಐರ್ಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಐರ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ದಾಖಲಿಸುವ ಮೂಲಕ ಭಾರತಕ್ಕೆ 183 ರನ್‌ಗಳ ಗುರಿಯನ್ನು ನೀಡಿತು. ಆದರೆ ಭಾರತ 18.5 ಓವರ್‌ಗಳಲ್ಲಿ 148 ರನ್‌ಗಳಿಗೆ ಆಲ್‌ಔಟ್ ಆಯಿತು. ಈ ಮೂಲಕ ಐರ್ಲೆಂಡ್ 34 ರನ್‌ಗಳ ಜಯ ದಾಖಲಿಸಿ ಇತಿಹಾಸ ಬರೆಯಿತು.

ಐರ್ಲೆಂಡ್ ನೀಡಿದ ಸವಾಲಿನ ಗುರಿ ಬೆನ್ನಟ್ಟಲು ಮುಂದಾದ ಭಾರತದ ಪರ ಅಭಿಷೇಕ್ ಶರ್ಮಾ 49 ಹಾಗೂ ಶಿವಮ್ ದುಬೆ 25 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟ್ಸ್‌ಮನ್ ಸಹ ಇಪ್ಪತ್ತು ರನ್ ಗಡಿ ದಾಟಲೇ ಇಲ್ಲ. ಬೌಲಿಂಗ್‌ನಲ್ಲಿ ಪರವಾಗಿಲ್ಲ ಎಂಬ ಪ್ರದರ್ಶನವನ್ನು ನೀಡಿದ ಭಾರತಕ್ಕೆ ಬ್ಯಾಟಿಂಗ್ ವಿಭಾಗ ಕೈಕೊಟ್ಟಿದ್ದೇ ಸೋಲಿಗೆ ಪ್ರಮುಖ ಕಾರಣ ಎನ್ನಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಜು ಸ್ಯಾಮ್ಸನ್ 5, ಇಶಾನ್ ಕಿಶನ್ 1, ನಾಯಕ ಶ್ರೇಯಸ್ ಐಯ್ಯರ್ 3, ತಿಲಕ್ ವರ್ಮಾ 19, ವಾಷಿಂಗ್ಟನ್ ಸುಂದರ್ 9, ಅಕ್ಸರ್ ಪಟೇಲ್ 15, ಹರ್ಷಿತ್ ರಾಣಾ 8 ರನ್ ಗಳಿಸಿ ವಿಫಲರಾದದ್ದು ತಂಡವನ್ನು ಸೋಲಿನತ್ತ ಕೊಂಡೊಯ್ಯಿತು.

ಹೀಗೆ ಬ್ಯಾಟಿಂಗ್ ವಿಭಾಗದ ಹೀನಾಯ ಪ್ರದರ್ಶನದಿಂದ ತಂಡ ಸೋತಿದ್ದು, ಪಂದ್ಯದ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಐಯ್ಯರ್ ಎಲ್ಲಿಯೂ ಬ್ಯಾಟಿಂಗ್ ವಿಭಾಗದ ವೈಫಲ್ಯದ ಬಗ್ಗೆ ಮಾತನಾಡಲೇ ಇಲ್ಲ. ತಮ್ಮ ತಂಡದ ಬೌಲರ್‌ಗಳು ಆರಂಭದಲ್ಲಿ ಚೆನ್ನಾಗಿ ವಿಕೆಟ್ ಪಡೆದರು, ಬಳಿಕ ಎದುರಾಳಿ ಬ್ಯಾಟ್ಸ್‌ಮನ್‌ಗಳು ದೊಡ್ಡ ಹೊಡೆತಗಳನ್ನು ಬಾರಿಸಿದರು, ಬೌಂಡರಿ ಚಿಕ್ಕದಾಗಿತ್ತು ಎಂದೆಲ್ಲ ಹೇಳಿಕೆ ನೀಡಿದ ಐಯ್ಯರ್ ಕೊನೆಯಲ್ಲಿ ಮತ್ತೆ ಬೌಲರ್‌ಗಳು ಪುಟಿದೆದ್ದರು ಎಂದರು. ಹೀಗೆ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡಿದ ಶ್ರೇಯಸ್ ಬ್ಯಾಟಿಂಗ್ ಬಗ್ಗೆ ಒಂದು ಪದವನ್ನೂ ಮಾತನಾಡಲಿಲ್ಲ. ಅಲ್ಲದೇ ಆಗಿದ್ದನ್ನು ಮರೆತು ಮುಂದಿನ ಪಂದ್ಯಕ್ಕೆ ಸಿದ್ಧರಾಗಬೇಕು ಎಂದ ಐಯ್ಯರ್ ಉತ್ತಮ ಬೌಲಿಂಗ್ ಮಾಡಿದ ಹರ್ಷಿತ್ ರಾಣಾ ಹಾಗೂ ಶಿವಮ್ ದುಬೆಯನ್ನು ಹೊಗಳಿದರು. ಗಾಯದ ಸಮಸ್ಯೆಯಿಂದ ಹೊರಬಿದ್ದ ರಾಣಾ ಸಂದೇಶ ರವಾನಿಸಿದ್ದಾರೆ ಎಂದ ಶ್ರೇಯಸ್ ತಾನು ಶಿವಮ್ ದುಬೆಯನ್ನು ಯಾವಾಗಲೂ ಬೆಂಬಲಿಸುತ್ತೇನೆ, ಆತನ ಆಟವನ್ನು ಸ್ಥಳೀಯ ಕ್ರಿಕೆಟ್‌ನಲ್ಲೂ ಕಂಡಿದ್ದೇನೆ ಎಂದರು.

ಹೀಗೆ ಇಷ್ಟೆಲ್ಲ ಮಾತನಾಡಿದ ನಾಯಕ ಶ್ರೇಯಸ್ ಐಯ್ಯರ್ ಬ್ಯಾಟಿಂಗ್ ವಿಭಾಗದ ಕುರಿತು ತುಟಿಬಿಚ್ಚಲಿಲ್ಲ. ತಾನೇ ಕೇವಲ 3 ರನ್ ಗಳಿಸಿ ವಿಫಲನಾದ ಕಾರಣಕ್ಕೆ ಬ್ಯಾಟಿಂಗ್ ಬಗ್ಗೆ ಮಾತನಾಡದೇ ಸುಮ್ಮನಾದ್ರಾ ಎಂಬ ಪ್ರಶ್ನೆಯೂ ಸಹ ಕ್ರಿಕೆಟ್ ಪ್ರೇಕ್ಷಕರಲ್ಲಿ ಮೂಡಿದ್ದು, ಐಯ್ಯರ್ ಸೋತಾಗ ಸೋಲಿಗೆ ಕಾರಣವಾದ ಅಂಶದ ಬಗ್ಗೆ ಸರಿಯಾಗಿ ಮಾತನಾಡಬೇಕಾದ್ದನ್ನು ಕಲಿಯಬೇಕಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular