ಕಿರುತೆರೆಯ ಜನಪ್ರಿಯ ನಟಿ ಪ್ರಿಯಾಂಕಾ ಚಾಹರ್ ಚೌಧರಿ ಇತ್ತೀಚೆಗೆ ಪ್ರಸಿದ್ಧ ಬಾಲಿವುಡ್ ನಿರ್ದೇಶಕಿ ಫರಾ ಖಾನ್ ಅವರ ಯೂಟ್ಯೂಬ್ ವ್ಲಾಗ್‌ನಲ್ಲಿ ಭಾಗವಹಿಸಿ ತಮ್ಮ ಶೂಟಿಂಗ್ ದಿನಗಳ ರೋಚಕ ಹಾಗೂ ಕಠಿಣ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕಿರುತೆರೆಯ ಸೂಪರ್ ಹಿಟ್ ಫ್ರಾಂಚೈಸಿ ‘ನಾಗಿನ್ 7’ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ಅವರು, ಅದರ ಶೂಟಿಂಗ್ ಸಮಯದಲ್ಲಿ ಅನುಭವಿಸಿದ ದೈಹಿಕ ಹಾಗೂ ಮಾನಸಿಕ ಶ್ರಮದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
‘ಬ್ಯಾಟಲ್‌ಗ್ರೌಂಡ್’ ಕಾರ್ಯಕ್ರಮದ ಶೂಟಿಂಗ್‌ನಲ್ಲಿ ದಿನಕ್ಕೆ 18 ಗಂಟೆಗಳ ಕಾಲ ತೊಡಗಿಸಿಕೊಳ್ಳುತ್ತಿದ್ದ ಪ್ರಿಯಾಂಕಾ, ಬೆಳಗಿನ ಜಾವ 6 ಅಥವಾ 7 ಗಂಟೆಗೆ ಆ ಕೆಲಸ ಮುಗಿಸುತ್ತಿದ್ದರು. ಅಲ್ಲಿಂದ ತಕ್ಷಣವೇ ತಯಾರಾಗಿ ಬೆಳಿಗ್ಗೆ 9 ಗಂಟೆಗೆ ‘ನಾಗಿನ್ 7’ ಶೂಟಿಂಗ್ ಸೆಟ್ ತಲುಪಬೇಕಿತ್ತು. ಅಲ್ಲಿ ಮತ್ತೆ ಸತತ 12 ಗಂಟೆಗಳ ಕಾಲ ಅಂದರೆ ರಾತ್ರಿ 9 ಗಂಟೆಯವರೆಗೆ ಅಭಿನಯಿಸುತ್ತಿದ್ದರು. ಪ್ರಯಾಣ, ಮೇಕಪ್ ಮತ್ತು ನಡುವಿನ ಅಲ್ಪ ಸಮಯವನ್ನು ಲೆಕ್ಕ ಹಾಕಿದರೆ ಸತತ 36 ಗಂಟೆಗಳಿಗೂ ಹೆಚ್ಚು ಕಾಲ ಅವರು ವಿಶ್ರಾಂತಿಯಿಲ್ಲದೆ ದುಡಿಯುತ್ತಿದ್ದರು. ಸುಮಾರು 40 ಗಂಟೆಗಳ ನಂತರವಷ್ಟೇ ಅವರಿಗೆ ಸಣ್ಣ ನಿದ್ದೆ ಮಾಡಲು ಸಮಯ ಸಿಗುತ್ತಿತ್ತಂತೆ. ಎಷ್ಟೇ ಆಯಾಸವಾದರೂ ಹಗಲಿನಲ್ಲಿ ನಿದ್ದೆ ಮಾಡುವ ಅಭ್ಯಾಸ ತಮಗಿಲ್ಲ ಎಂದೂ ಅವರು ಹೇಳಿದ್ದಾರೆ.
ಆರಂಭದಲ್ಲಿ ನಾಗಿನ್ 7 ಆಫರ್ ಬಂದಾಗ ತಮಗೆ ಸವಾಲಿನ ಹಾಗೂ ನೈಜ ನಟನೆಯ ಪಾತ್ರಗಳನ್ನು ಮಾಡುವ ಆಸೆಯಿತ್ತು. ಹಾಗಾಗಿ ಈ ಪ್ರಾಜೆಕ್ಟ್ ಒಪ್ಪಿಕೊಳ್ಳಲು ಅವರು ಹಿಂಜರಿದಿದ್ದರು. ಅಮೆರಿಕಾಗೆ ಪ್ರಯಾಣಿಸುವಾಗ ಈ ಆಫರ್ ಬಂದಿದ್ದು, ಯೋಚಿಸಲು ಸಮಯ ಬೇಕೆಂದು ತಂಡಕ್ಕೆ ತಿಳಿಸಿದ್ದರು. ಕಿರುತೆರೆಯ ಅತ್ಯಂತ ಯಶಸ್ವಿ ಶೋ ಆಫರ್ ರದ್ದು ಮಾಡುವ ನಿರ್ಧಾರ ಕೇಳಿ ಅವರ ಟೀಮ್ ಅಚ್ಚರಿಪಟ್ಟಿತ್ತು ಎಂದು ಫರಾ ಖಾನ್ ಬಳಿ ಪ್ರಿಯಾಂಕಾ ನೆನಪಿಸಿಕೊಂಡಿದ್ದಾರೆ. ಪ್ರಸ್ತುತ ನಾಗಿನ್ ಶೋ ಮುಕ್ತಾಯಗೊಂಡಿದ್ದು, ಪ್ರಿಯಾಂಕಾ ತಮ್ಮ ಮುಂದಿನ ಹೊಸ ಪ್ರಾಜೆಕ್ಟ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

