ಬೆಂಗಳೂರು: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಭೂಮಿಯಲ್ಲಿ ಫಲ ವೃಕ್ಷೋದ್ಯಾನ ಅಭಿವೃದ್ಧಿಪಡಿಸಿ ವಾರ್ಷಿಕ ನಿರ್ವಹಣೆ ಆಧಾರದ ಮೇಲೆ ಪಾರದರ್ಶಕವಾಗಿ ಹರಾಜು ಹಾಕಿ ಸ್ಥಳೀಯ ಯುವಕರಿಗೆ ಗುತ್ತಿಗೆ ನೀಡಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.
ಪ್ರತಿ ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಮೂಲಕ ಫಲ ವೃಕ್ಷೋದ್ಯಾನ ಅಭಿವೃದ್ಧಿಪಡಿಸುವುದರಿಂದ ಹಸಿರು ಹೊದಿಕೆ ಹೆಚ್ಚಾಗುತ್ತದೆ. ನಿರುದ್ಯೋಗಿ, ಭೂ ರಹಿತ ಯುವ ಜನರಿಗೆ ಉದ್ಯೋಗ ಲಭಿಸುತ್ತದೆ. ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆಗೆ ಆದಾಯವೂ ಬರುತ್ತದೆ. ಸರ್ಕಾರಿ ಭೂಮಿ ಒತ್ತುವರಿ ತಡೆಯಬಹುದಾಗಿದೆ. ಇದಕ್ಕಾಗಿ ಎರಡು ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕ್ರಿಯಾ ಯೋಜನೆ ರೂಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿಗೆ ಸಚಿವರು ಲಿಖಿತ ಸೂಚನೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಭೂಮಿಯಲ್ಲಿ ತೋಟಗಾರಿಕೆ ಬೆಳೆಗಳಾದ ಮಾವು, ಸಪೋಟ, ಬೆಟ್ಟ ನೆಲ್ಲಿಕಾಯಿ, ತೆಂಗು, ಹೈಬ್ರಿಡ್ ನೇರಳೆ, ಹುಣಸೆ ಸೇರಿ ಇನ್ನಿತರ ಗಿಡಗಳನ್ನು ಬೆಳೆಸಿದರೆ ಆದಾಯ ಬರುತ್ತದೆ. ಸರ್ಕಾರಿ ಭೂಮಿ ಒತ್ತುವರಿ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ.
ತೋಟಗಾರಿಕೆ ಬೆಳೆಯಾಗಿರುವ ಮರಗಳನ್ನು ಯಾವಾಗ ಬೇಕಾದರೂ ತೆರವು ಮಾಡಿ ಸರ್ಕಾರದ ಯೋಜನೆಗಳಿಗೆ ಭೂಮಿ ಬಳಸಿಕೊಳ್ಳಲು ಅವಕಾಶ ಇರುತ್ತದೆ. ವಿಬಿ ಜಿ ರಾಮ್ ಜಿ ಸಹಯೋಗದಡಿ ವೃಕ್ಷೋದ್ಯಾನ ಅಭಿವೃದ್ಧಿಗೆ ಕಂದಾಯ, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕ್ರಿಯಾಯೋಜನೆ ರೂಪಿಸುವಂತೆ ಸಚಿವ ಈಶ್ವರ್ ಕಂಡ್ರೆ ಸೂಚನೆ ನೀಡಿದ್ದಾರೆ.

