ಯುವಕನೋರ್ವನ ಜೊತೆ ಹೋಟೆಲ್ ಕೊಠಡಿಗೆ ತೆರಳಿದ್ದ 20 ವರ್ಷದ ಯುವತಿಯೊಬ್ಬಳು, ಕೆಲವೇ ನಿಮಿಷಗಳಲ್ಲಿ ಹೋಟೆಲ್‌ನ 4ನೇ ಮಹಡಿಯಿಂದ ಕೆಳಕ್ಕೆ ಜಿಗಿದಿರುವ ಆಘಾತಕಾರಿ ಘಟನೆ ದೆಹಲಿಯ ಫರ್ಶ್ ಬಜಾರ್ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬುಲಂದ್‌ಶಹರ್ ನಿವಾಸಿ 22 ವರ್ಷದ ಯುವಕ ಮತ್ತು ದೆಹಲಿಯ ಸುಂದರಿ ನಗರದ ನಿವಾಸಿ 20 ವರ್ಷದ ಯುವತಿ ಫೆಬ್ರವರಿ 13ರ ಶುಕ್ರವಾರದಂದು ಫರ್ಶ್ ಬಜಾರ್‌ನಲ್ಲಿರುವ ‘ಹೋಟೆಲ್ ಸಂತೋಷ್ ರೆಸಿಡೆನ್ಸಿ’ಗೆ ತೆರಳಿದ್ದರು. ರೂಮ್ ಬುಕ್ ಮಾಡಿ ಒಳಹೋದ ಕೇವಲ 20 ನಿಮಿಷಗಳಲ್ಲೇ ಈ ಅವಘಡ ಸಂಭವಿಸಿದೆ.ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮದುವೆಯ ವಿಚಾರವಾಗಿ ಯುವಕ ಮತ್ತು ಯುವತಿಯ ನಡುವೆ ಹೋಟೆಲ್ ರೂಮ್‌ನಲ್ಲಿ ತೀವ್ರ ಜಗಳ ನಡೆದಿದೆ. ಯುವಕ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದ ಯುವತಿ, ಆವೇಶದಲ್ಲಿ ಕಿಟಕಿಯಿಂದ ಕೆಳಕ್ಕೆ ಜಿಗಿದಿದ್ದಾಳೆ ಎನ್ನಲಾಗಿದೆ.
ಜೀವ ಉಳಿಸಿದ ಸಮಯಪ್ರಜ್ಞೆ
ಯುವತಿ ಕಿಟಕಿಯ ಅಂಚಿನಲ್ಲಿ ಕುಳಿತಿರುವುದನ್ನು ಗಮನಿಸಿದ ಹತ್ತಿರದ ಎಲೆಕ್ಟ್ರಾನಿಕ್ಸ್ ಅಂಗಡಿಯ ಉದ್ಯೋಗಿ ಆಶಿಶ್ ಎಂಬುವವರು ತಕ್ಷಣವೇ ಸಮಯಪ್ರಜ್ಞೆ ಮೆರೆದಿದ್ದಾರೆ. ಯುವತಿ ಬೀಳುವ ಜಾಗದಲ್ಲಿ ಸಾಲು ಸಾಲಾಗಿ ಕಾರ್ಡ್‌ಬೋರ್ಡ್ ಬಾಕ್ಸ್‌ಗಳನ್ನು (ಹಲಗೆ ಪೆಟ್ಟಿಗೆ) ಜೋಡಿಸಿಟ್ಟಿದ್ದಾರೆ. ಯುವತಿ ಕೆಳಕ್ಕೆ ಬಿದ್ದಾಗ ಈ ಬಾಕ್ಸ್‌ಗಳು ಆಕೆಯ ವೇಗವನ್ನು ತಡೆದು ಪ್ರಾಣಾಪಾಯದಿಂದ ರಕ್ಷಿಸಿವೆ.
ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವತಿಯ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯುವಕ ಮತ್ತು ಹೋಟೆಲ್ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

