ಬೆಂಗಳೂರು: ಬೈಕ್ ವಿಚಾರಕ್ಕೆ ಪ್ರೇಯಸಿ ಸೇರಿದಂತೆ ಮೂವರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತರಬನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತರಬನಹಳ್ಳಿಯಲ್ಲಿ ಸುಮಲತಾ, ತಂದೆ ಶ್ರೀರಾಮ(48) ಹಾಗೂ ತಾಯಿ ಮಂಜಮ್ಮ(42) ಅವರಿಗೆ ಪಾಂಡುರಂಗ(29) ಎಂಬಾತ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದು, ಆರೋಪಿಯನ್ನು ಬಂಧಿಸಲಾಗಿದೆ. 4 ವರ್ಷದ ಹಿಂದೆ ಗಂಡನಿಂದ ದೂರವಾಗಿದ್ದ ಸುಮಲತಾ ಯಶವಂತಪುರದ ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದರು. ಪಾಂಡುರಂಗನ ಜೊತೆಗೆ ಸುಮಲತಾ ಮನೆ ಬಿಟ್ಟು ಹೋಗಿದ್ದರು. ನಾಲ್ಕು ವರ್ಷದಿಂದ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದರು. ಮಹಾಲಕ್ಷ್ಮಿ ಲೇಔಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಬೇರೊಂದು ಹುಡುಗಿ ಸಹವಾಸ ಮಾಡಿದ್ದ ಪಾಂಡುರಂಗ ಗಲಾಟೆ ಮಾಡಿದ್ದರಿಂದ ಸುಮಲತಾ ತಾಯಿಯ ಮನೆಗೆ ಬಂದಿದ್ದರು. ಮನೆ ಬಳಿ ಬಂದು ಪಾಂಡುರಂಗ ಬೈಕ್ ಕೇಳಿದ್ದಾನೆ. ಬೈಕ್ ನನ್ನ ಅಕ್ಕನದು ಅದನ್ನು ಕೊಡುವುದಿಲ್ಲ ಎಂದು ಸುಮಲತಾ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದು ಸುಮಲತಾ ಮನೆಯ ಬಳಿ ಗಲಾಟೆ ಮಾಡಿದ್ದಾನೆ. ಸುಮಲತಾ, ತಂದೆ, ತಾಯಿ ಮೂವರೂ ಬೈದಿದ್ದಾರೆ. ಅವರು ಬೈಯುತ್ತಿದ್ದಂತೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಆರೋಪಿ ಪಾಂಡುರಂಗ ಪರಾರಿಯಾಗಿದ್ದಾನೆ. ಗಾಯಗೊಂಡ ಮೂವರ ಸ್ಥಿತಿ ಚಿಂತಾಜನಕವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

