ನೇಪಾಳ : ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹ ಭಾರೀ ಅವಾಂತರ ಸೃಷ್ಟಿಸಿದೆ. ಟಿಬೆಟ್ ಕಡೆಯಿಂದ ಭೋತೆ ಕೋಶಿ ನದಿಗೆ ಭಾರಿ ಪ್ರಮಾಣದ ನೀರು, ಕೆಸರು ಹಾಗೂ ಬಂಡೆಗಳು ನುಗ್ಗಿದ ಪರಿಣಾಮ ರಾಸುವಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಪ್ರವಾಹದ ರಭಸಕ್ಕೆ ಹಲವು ಮನೆಗಳು ಹಾಗೂ ಕಟ್ಟಡಗಳು ಕುಸಿದು ಬಿದ್ದಿದ್ದು, ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿ ಹೋಗಿವೆ. ಭೋತೆ ಕೋಶಿ ನದಿಯ ದಡದಲ್ಲಿದ್ದ ಕಟ್ಟಡಗಳು ಕ್ಷಣಾರ್ಧದಲ್ಲೇ ನೀರಿನಲ್ಲಿ ಕೊಚ್ಚಿಹೋಗುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ರಾಸುವಾ ಜಿಲ್ಲೆಯ ಟಿಮುರೆ ಹಾಗೂ ಸ್ಯಾಫ್ರುಬೆಸಿ ಪ್ರದೇಶಗಳು ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾಗಿವೆ. ಹಲವು ಪ್ರಮುಖ ಮೂಲಸೌಕರ್ಯಗಳು ಹಾಗೂ ಜಲವಿದ್ಯುತ್ ಯೋಜನೆಗಳಿಗೂ ಹಾನಿಯಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಭರದಿಂದ ನಡೆಯುತ್ತಿವೆ.
ಪ್ರವಾಹದಲ್ಲಿ ನೂರಾರು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಹಿನ್ನೆಲೆಯಲ್ಲಿ ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಭೀಕರ ಪ್ರವಾಹದ ದೃಶ್ಯಗಳು: ಸೇತುವೆಗಳು ಕುಸಿದು ನದಿಯಲ್ಲಿ ಕೊಚ್ಚಿಹೋಗುವುದು, ಮನೆ-ಕಟ್ಟಡಗಳಿಗೆ ನುಗ್ಗಿದ ಕೆಸರು ನೀರು ಹಾಗೂ ಭಾರೀ ಪ್ರಮಾಣದಲ್ಲಿ ಹರಿದುಬರುವ ಪ್ರವಾಹದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದುರಂತದ ಭೀಕರತೆಯನ್ನು ತೋರಿಸುತ್ತಿವೆ.
ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಕನಿಷ್ಠ 165 ಮಂದಿ ಮೃತಪಟ್ಟಿದ್ದು, ನೂರಾರು ಜನರು ನಾಪತ್ತೆಯಾಗಿದ್ದಾರೆ. ಮಣ್ಣು, ಕಲ್ಲು-ಬಂಡೆಗಳು ಹಾಗೂ ಅವಶೇಷಗಳಿಂದ ಹಲವು ಪ್ರದೇಶಗಳಿಗೆ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ರಕ್ಷಣಾ ತಂಡಗಳು ಸಂತ್ರಸ್ತರನ್ನು ತಲುಪಲು ಹರಸಾಹಸಪಡುತ್ತಿವೆ.
ನೇಪಾಳ-ಚೀನಾ ಗಡಿ ಪ್ರದೇಶದ ಬಳಿ ಆರಂಭವಾದ ಪ್ರವಾಹವು ಕ್ಷಣಾರ್ಧದಲ್ಲೇ ಕೆಳಭಾಗದತ್ತ ಹರಿದು ಹಲವು ಜಿಲ್ಲೆಗಳಲ್ಲಿ ಭಾರೀ ನಾಶ ಉಂಟುಮಾಡಿದೆ. ರಸ್ತೆಗಳು, ಸೇತುವೆಗಳು ಕೊಚ್ಚಿಹೋಗಿದ್ದು, ಗ್ರಾಮಗಳು ಜಲಾವೃತಗೊಂಡಿವೆ. ಹಲವು ಜಲವಿದ್ಯುತ್ ಯೋಜನೆಗಳಿಗೂ ಹಾನಿಯಾಗಿದೆ.
ಪ್ರವಾಹಕ್ಕೆ ಕಾರಣವೇನು?
ನೇಪಾಳ-ಟಿಬೆಟ್ ಗಡಿಯಲ್ಲಿರುವ ಲೆಹೆಂಡೆ ನದಿ ಪ್ರದೇಶದಿಂದ ಈ ದುರಂತ ಆರಂಭವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹಿಮ ಮತ್ತು ಬಂಡೆಗಳನ್ನು ಒಳಗೊಂಡ ಭೂಕುಸಿತದಿಂದ ಏಕಾಏಕಿ ಭಾರಿ ಪ್ರಮಾಣದ ನೀರು ಮತ್ತು ಅವಶೇಷಗಳು ನದಿಗೆ ನುಗ್ಗಿರುವುದು ಪ್ರವಾಹಕ್ಕೆ ಕಾರಣವಾಗಿರಬಹುದು ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಸಂಸತ್ತಿನಲ್ಲಿ ಮಾತನಾಡಿ, ಸ್ಥಳೀಯ ಕಾಲಮಾನ ಬೆಳಗ್ಗೆ 8.37ಕ್ಕೆ ಟಿಬೆಟ್ ಪ್ರದೇಶದಲ್ಲಿ ಭೂಕಂಪನದಂತಹ ಕಂಪನ ದಾಖಲಾಗಿತ್ತು. ಇದಾದ ಮೂರು ನಿಮಿಷಗಳ ಬಳಿಕ ಹಠಾತ್ ಪ್ರವಾಹದ ವರದಿ ಬಂದಿತ್ತು ಎಂದು ತಿಳಿಸಿದ್ದಾರೆ.
ಆದರೆ, ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ದಾಖಲಾಗಿದ್ದ ಕಂಪನವು ಸಾಮಾನ್ಯ ಭೂಕಂಪದಿಂದ ಉಂಟಾದದ್ದಲ್ಲ. ಬದಲಾಗಿ ಹಿಮನದಿ ಪ್ರದೇಶದಲ್ಲಿನ ಬಂಡೆ ಮತ್ತು ಹಿಮ ಕುಸಿತಕ್ಕೆ ಸಂಬಂಧಿಸಿದ ಕಂಪನವಾಗಿತ್ತು ಎಂದು ತಿಳಿಸಿದೆ.ಹಿಮ, ಬಂಡೆ, ಮಣ್ಣು ಮತ್ತು ನೀರಿನ ಭಾರೀ ಪ್ರವಾಹವು ಭೋತೆ ಕೋಶಿ ನದಿಗೆ ನುಗ್ಗಿ, ಬಳಿಕ ರಾಸುವಾ ಜಿಲ್ಲೆಯ ಟಿಮುರೆ ಬಳಿ ತ್ರಿಶೂಲಿ ನದಿಯನ್ನು ಸೇರಿದೆ.ನೇಪಾಳದ ಜಲವಿಜ್ಞಾನ ಮತ್ತು ಹವಾಮಾನಶಾಸ್ತ್ರ ಇಲಾಖೆ ಪ್ರಕಾರ, ರಾಸುವಾ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದ ಈ ಪ್ರವಾಹ ಉಂಟಾಗಿಲ್ಲ.
ಯಾವೆಲ್ಲ ಪ್ರದೇಶಗಳಿಗೆ ಹಾನಿ?
ರಾಸುವಾ ಮತ್ತು ಧಾದಿಂಗ್ ಜಿಲ್ಲೆಗಳು ಅತ್ಯಂತ ಹೆಚ್ಚು ಹಾನಿಗೊಳಗಾಗಿವೆ. ಬಳಿಕ ಪ್ರವಾಹವು ಕೆಳಭಾಗದತ್ತ ಹರಿದು ನುವಾಕೋಟ್, ಚಿತ್ವಾನ್, ಗೋರಖಾ, ತನಾಹು ಮತ್ತು ನವಲಪರಾಸಿ ಪೂರ್ವ ಜಿಲ್ಲೆಗಳಿಗೂ ತಲುಪಿದೆ.ಈ ಪ್ರದೇಶಗಳು ರಾಜಧಾನಿ ಕಠ್ಮಂಡುವಿನಿಂದ ಸುಮಾರು 70ರಿಂದ 200 ಕಿಲೋಮೀಟರ್ ವ್ಯಾಪ್ತಿಯಲ್ಲಿವೆ.
ಪ್ರವಾಹದ ರಭಸಕ್ಕೆ ಮನೆಗಳು, ವಾಹನಗಳು, ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿವೆ. ಅಧಿಕಾರಿಗಳ ಪ್ರಕಾರ 19 ಮೋಟಾರು ಸಂಚಾರ ಸೇತುವೆಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ. ನುವಾಕೋಟ್‌ನ ಬೆಟ್ರಾವತಿಯಿಂದ ರಾಸುವಾಗಢಿ ಗಡಿ ಪ್ರದೇಶದವರೆಗೆ ಸಂಪರ್ಕ ಕಲ್ಪಿಸುವ 42 ಕಿಲೋಮೀಟರ್ ಉದ್ದದ ರಸ್ತೆಯೂ ಹಾನಿಗೊಳಗಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಕೆಸರು ಮಿಶ್ರಿತ ನೀರು, ಬಂಡೆಗಳು ಮತ್ತು ಅವಶೇಷಗಳು ಭೀಕರ ವೇಗದಲ್ಲಿ ಜನವಸತಿ ಪ್ರದೇಶಗಳ ಮೂಲಕ ಹರಿದುಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ. ಹಲವು ಅಂತಸ್ತಿನ ಕಟ್ಟಡವೊಂದು ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವ ದೃಶ್ಯವೂ ಸೆರೆಯಾಗಿದೆ. ವಾಹನಗಳು ನೀರಿನಲ್ಲಿ ಕೊಚ್ಚಿಹೋಗುವುದು ಹಾಗೂ ಕೆಲವೇ ಸೆಕೆಂಡ್‌ಗಳಲ್ಲಿ ಸೇತುವೆಗಳು ಕುಸಿದು ಬೀಳುತ್ತಿರುವ ದೃಶ್ಯಗಳು ಕೂಡ ವೈರಲ್ ಆಗಿವೆ.
ರಾಸುವಾದ ಆರೋಗ್ಯ ಕಾರ್ಯಕರ್ತ ತುಲಾ ಬಹಾದೂರ್ ಬಿಕೆ ಅವರು ರಾಯಿಟರ್ಸ್‌ಗೆ ಪ್ರತಿಕ್ರಿಯಿಸಿ, “ನಾವು ನೋಡಿದಲ್ಲೆಲ್ಲಾ ವಿನಾಶವೇ ಕಾಣುತ್ತಿದೆ. ನದಿಯ ಪಕ್ಕದಲ್ಲಿದ್ದ ವಸತಿ ಪ್ರದೇಶಗಳು ಸಂಪೂರ್ಣ ಕೊಚ್ಚಿಹೋಗಿವೆ. ನನ್ನ ಐವರು ಸಂಬಂಧಿಕರೂ ನಾಪತ್ತೆಯಾಗಿದ್ದಾರೆ” ಎಂದು ಹೇಳಿದ್ದಾರೆ.
ಸಾವಿನ ಸಂಖ್ಯೆ ಎಷ್ಟು? ಎಷ್ಟು ಮಂದಿ ನಾಪತ್ತೆ?
ನೇಪಾಳ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ 162 ಮಂದಿ ಮೃತಪಟ್ಟಿದ್ದಾರೆ. ಅಧಿಕಾರಿಗಳ ಪ್ರಕಾರ ನೂರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.ಸಂಪರ್ಕ ವ್ಯವಸ್ಥೆಗಳು ಹಾನಿಗೊಳಗಾಗಿರುವುದರಿಂದ ಮತ್ತು ಹಲವು ಪ್ರದೇಶಗಳಿಗೆ ರಕ್ಷಣಾ ತಂಡಗಳು ಇನ್ನೂ ತಲುಪಲು ಸಾಧ್ಯವಾಗದ ಕಾರಣ ಸಾವಿನ ಹಾಗೂ ನಾಪತ್ತೆಯಾದವರ ಸಂಖ್ಯೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.
ಚೀನಾ ಸರ್ಕಾರಿ ಪ್ರಸಾರ ಸಂಸ್ಥೆಯ ಪ್ರಕಾರ, ಗಡಿಯ ಚೀನಾ ಭಾಗದಲ್ಲಿ 3 ಮಂದಿ ಮೃತಪಟ್ಟಿದ್ದು, 265 ಮಂದಿ ನಾಪತ್ತೆಯಾಗಿದ್ದಾರೆ. ಆದರೆ ಈ ಸಂಖ್ಯೆಯನ್ನು ಅಧಿಕಾರಿಗಳು ಇನ್ನೂ ಪರಿಶೀಲಿಸುತ್ತಿದ್ದಾರೆ. ನೇಪಾಳದಲ್ಲಿ ನಾಪತ್ತೆಯಾಗಿರುವವರ ಪೈಕಿ ಕನಿಷ್ಠ 133 ಭಾರತೀಯರು ಮತ್ತು 37 ಅನಿವಾಸಿ ಭಾರತೀಯರು ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೈಲಾಸ ಮಾನಸ ಸರೋವರ ಯಾತ್ರೆಗೆ ಈ ಪ್ರದೇಶ ಪ್ರಮುಖ ಮಾರ್ಗವಾಗಿದ್ದು, ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಯಾತ್ರಿಕರು ಇಲ್ಲಿಗೆ ಆಗಮಿಸುತ್ತಾರೆ. ಇಶಾ ಫೌಂಡೇಶನ್ ಪ್ರಕಾರ, ವಲಸೆ ಕಚೇರಿಯಲ್ಲಿದ್ದ ಅದರ 77 ಸದಸ್ಯರು ನಾಪತ್ತೆಯಾಗಿದ್ದಾರೆ. ಸಂಸ್ಥೆಯ ಸಂಸ್ಥಾಪಕ ಸದ್ಗುರು ಅವರ ಪ್ರಕಾರ, ಕಚೇರಿಯಲ್ಲಿದ್ದವರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ 495 ಮಂದಿ ಸುರಕ್ಷಿತವಾಗಿ ಹಿಂದಿರುಗಿದ್ದಾರೆ.
ತಮಿಳುನಾಡಿನ ತಂಜಾವೂರಿನ 37 ಮಂದಿ ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶ ಮತ್ತು ಕೇರಳ ಸೇರಿದಂತೆ ಹಲವು ರಾಜ್ಯಗಳು ತಮ್ಮ ನಾಗರಿಕರ ಸುರಕ್ಷತೆ ಕುರಿತು ಮಾಹಿತಿ ಪಡೆಯಲು ಸಹಾಯವಾಣಿ ಆರಂಭಿಸಿವೆ.
ನಾಪತ್ತೆಯಾಗಿರುವ ವಿದೇಶಿ ನಾಗರಿಕರಲ್ಲಿ ಅಮೆರಿಕ, ಬ್ರಿಟನ್, ಮಲೇಷ್ಯಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನೆದರ್‌ಲ್ಯಾಂಡ್ಸ್‌ನ ಪ್ರವಾಸಿಗರೂ ಇರುವ ಸಾಧ್ಯತೆಯಿದೆ. ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ದಕ್ಷಿಣ ಕೊರಿಯಾದ 8 ನಾಗರಿಕರು ಕೂಡ ನಾಪತ್ತೆಯಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯುತ್ತಿದೆ?
ನೇಪಾಳ ಸರ್ಕಾರವು ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರನ್ನು ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದೆ.ನೇಪಾಳ ಸೇನೆಯು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ 12 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ರಾಸುವಾ ಜಿಲ್ಲೆಯ ಸ್ಯಾಫ್ರುಬೆಸಿಯಿಂದ 6 ಮಂದಿ, ಮೈಲುಂಗ್‌ನಿಂದ 2 ಮಂದಿ ಮತ್ತು ಧುಂಚೆಯಿಂದ 4 ಮಂದಿಯನ್ನು ಹೆಲಿಕಾಪ್ಟರ್‌ಗಳ ಮೂಲಕ ಸ್ಥಳಾಂತರಿಸಲಾಗಿದೆ.
ಆದರೆ ರಸ್ತೆಗಳು, ಸಂಪರ್ಕ ವ್ಯವಸ್ಥೆ ಮತ್ತು ವಿದ್ಯುತ್ ಮೂಲಸೌಕರ್ಯಗಳು ಹಾನಿಗೊಳಗಾಗಿರುವುದು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಅಡ್ಡಿಯಾಗಿದೆ. ಕೆಲವು ಅತ್ಯಂತ ಹಾನಿಗೊಳಗಾದ ಪ್ರದೇಶಗಳಲ್ಲಿ ಪ್ರವಾಹದ ನೀರು ಮತ್ತು ಅವಶೇಷಗಳ ಅಪಾಯ ಮುಂದುವರಿದಿರುವುದರಿಂದ ಹೆಲಿಕಾಪ್ಟರ್‌ಗಳನ್ನೂ ಇಳಿಸಲು ಸಾಧ್ಯವಾಗುತ್ತಿಲ್ಲ.
ನೇಪಾಳ ಸೇನೆಯು ತ್ರಿಶೂಲಿಯಲ್ಲಿರುವ ಮಿಲಿಟರಿ ತರಬೇತಿ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ಸ್ಥಾಪಿಸಿದೆ. ತುರ್ತು ವೈದ್ಯಕೀಯ ರಕ್ಷಣಾ ತಂಡವನ್ನು ಹೊತ್ತ MI-17 ಹೆಲಿಕಾಪ್ಟರ್ ಅನ್ನು ತ್ರಿಶೂಲಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.ಅಧಿಕಾರಿಗಳ ಪ್ರಕಾರ ವಿವಿಧ ಪ್ರದೇಶಗಳಿಂದ ಸುಮಾರು 100 ಮಂದಿಯನ್ನು ರಕ್ಷಿಸಲಾಗಿದೆ. ಅವರಲ್ಲಿ 30 ಮಂದಿಗೆ ಕಠ್ಮಂಡುವಿನ ತ್ರಿಭುವನ್ ವಿಶ್ವವಿದ್ಯಾಲಯ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

