ಮಂಡ್ಯ: ಕಬ್ಬಿಣ ಮತ್ತು ಗೋಡೆ ಕೊರೆಯುವ ಯಂತ್ರ ಹಿಡಿದಿದ್ದ ಬಾಲಕ ಆಕಸ್ಮಿಕವಾಗಿ ಅದನ್ನು ಆನ್ ಮಾಡಿದ್ದರಿಂದ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದಿದೆ.
11 ವರ್ಷದ ದರ್ಶನ್ ಮೃತಪಟ್ಟ ಬಾಲಕ. ದರ್ಶನ್ ತಂದೆ ಪುಟ್ಟಸ್ವಾಮಿ ಗಾರೆ ಕೆಲಸಗಾರರಾಗಿದ್ದು, ಮನೆಯ ಬಳಿ ಗೋಡೆ ಕೊರೆಯುವ ಯಂತ್ರ ಇಟ್ಟಿದ್ದರು. ಮಧ್ಯಾಹ್ನ ಆಟವಾಡಿಕೊಂಡಿದ್ದ ದರ್ಶನ್ ಆ ಯಂತ್ರವನ್ನು ತೆಗೆದುಕೊಂಡು ಆಕಸ್ಮಿಕವಾಗಿ ಆನ್ ಮಾಡಿದ್ದಾನೆ. ಕೂಡಲೇ ಯಂತ್ರದ ಚಕ್ರ ಆತನ ಎದೆ, ಭುಜ, ಕೈಗಳನ್ನು ಸೀಳಿದೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಕೂಡಲೇ ಪೋಷಕರು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲಿ ದರ್ಶನ್ ಮೃತಪಟ್ಟಿದ್ದಾನೆ. ಬೆಳ್ಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

