ನವದೆಹಲಿ: ಗರ್ಭಪಾತಕ್ಕೆ ಮಹಿಳೆಯ ಇಚ್ಛೆ, ಒಪ್ಪಿಗೆ ಮಾತ್ರ ಮುಖ್ಯವಾಗಿದೆ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತಿಯ ಒಪ್ಪಿಗೆ ಇಲ್ಲದೆ ಗರ್ಭಪಾತ ಮಾಡಿಸಿಕೊಳ್ಳಲು ಮಹಿಳೆಯೊಬ್ಬರಿಗೆ ಅನುಮತಿ ನೀಡಲಾಗಿದೆ. ತನ್ನ 16 ವಾರಗಳ ಗರ್ಭ ತೆಗೆಸಲು ಅನುಮತಿ ನೀಡುವಂತೆ ಕೋರಿ ಪಂಜಾಬ್ ನ 21 ವರ್ಷದ ಮಹಿಳೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿದೆ.
ತಾನು 2025ರ ಮೇ 2 ರಂದು ಮದುವೆಯಾಗಿದ್ದು ಪತಿಯೊಂದಿಗೆ ತನ್ನ ಸಂಬಂಧ ಉತ್ತಮವಾಗಿರಲಿಲ್ಲ ಎಂದು ಅರ್ಜಿದಾರ ಮಹಿಳೆ ತಿಳಿಸಿದ್ದಾರೆ. ಹಿಂದಿನ ವಿಚಾರಣೆಯಲ್ಲಿ ಮಹಿಳೆಯ ತಪಾಸಣೆ ನಡೆಸಲು ವೈದ್ಯಕೀಯ ಮಂಡಳಿ ರಚಿಸುವಂತೆ ಸ್ನಾತಕೋತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಕೋರ್ಟ್ ನಿರ್ದೇಶನ ನೀಡಿತ್ತು. ಗರ್ಭಪಾತಕ್ಕೆ ಒಳಗಾಗಲು ಮಹಿಳೆಯ ಸಮರ್ಥರಿದ್ದಾರೆ ಎಂದು ವೈದ್ಯಕೀಯ ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯ ಇಚ್ಛೆ ಮತ್ತು ಒಪ್ಪಿಗೆಯಷ್ಟೇ ಗರ್ಭಪಾತಕ್ಕೆ ಮುಖ್ಯವೆಂದು ಅಭಿಪ್ರಾಯಪಟ್ಟ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಪತಿ ಒಪ್ಪಿಗೆ ಇಲ್ಲದೆ ಗರ್ಭಪಾತ ನಡೆಸಲು ಮಹಿಳೆಗೆ ಅನುಮತಿ ನೀಡಿದೆ.

