ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ನಾಲೂರು ಸಮೀಪ ವೇಗವಾಗಿದ್ದ ಆಟೋ ತಡೆಗೋಡೆಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋದಲ್ಲಿದ್ದ ಮಹಿಳೆ ರುಂಡ, ಮುಂಡ ಬೇರ್ಪಟ್ಟು ಸಾವನ್ನಪ್ಪಿದ್ದಾರೆ.
ನಿಶ್ಮಿತಾ ಶೆಟ್ಟಿ(27) ಮೃತಪಟ್ಟವರು. ಅವರ ಪತಿ ಸುದರ್ಶನ್ ಶೆಟ್ಟಿ(35), ಪುತ್ರ ಸಂಚಿತ್(7) ಗಾಯಗೊಂಡಿದ್ದು ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಚಾಲಕ ಯಲ್ಲಪ್ಪ ಕೂಡ ಗಾಯಗೊಂಡಿದ್ದಾರೆ. ಆಟೋ ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.
ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣ ಸಮೀಪದ ಹೋಟೆಲ್ ಮಾಲೀಕರಾದ ಸುದರ್ಶನ್ ಶೆಟ್ಟಿ ಮತ್ತು ಕುಟುಂಬದವರು ಉಡುಪಿಯ ಹೆಬ್ರಿ ಸಮೀಪದ ಸಂಬಂಧಿಕರ ಮನೆ ಗೃಹಪ್ರವೇಶಕ್ಕೆ ಆಟೋದಲ್ಲಿ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ಬರುವಾಗ ನಾಲೂರು ಸಮೀಪ ತಿರುವಿನಲ್ಲಿ ರಸ್ತೆ ಪಕ್ಕದ ಕಬ್ಬಿಣದ ತಡೆಗೋಡೆಗೆ ಆಟೋ ಡಿಕ್ಕಿ ಹೊಡೆದಿದೆ. ಆಟೋ ಡಿಕ್ಕಿಯ ರಭಸಕ್ಕೆ ಬಲಭಾಗದಲ್ಲಿ ಕುಳಿತಿದ್ದ ನಿಶ್ಮಿತಾ ಶೆಟ್ಟಿ ರುಂಡ, ಮುಂಡ ಬೇರ್ಪಟ್ಟು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

