ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲೆ ಪಟ್ಟಣದಲ್ಲಿ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಘಟನೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳವಾರ ಬಾಲಕಿಯ ಶವವು ಆರೋಪಿಯ ಮನೆಯಲ್ಲಿದ್ದ ನೀರಿನ ಡ್ರಮ್ನಲ್ಲಿ ಪತ್ತೆಯಾಗಿದೆ. ಸಂತ್ರಸ್ತೆಯ ಮನೆಯ ಸಮೀಪವೇ ವಾಸವಾಗಿದ್ದ ಕುಲವರ್ಧನ್ (30) ಎಂಬಾತನನ್ನು ಆರೋಪಿ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿ ಕುಲವರ್ಧನ್ ಮಾದಕ ವ್ಯಸನಿ ಮತ್ತು ಕುಡುಕನಾಗಿದ್ದ. ಎರಡನೇ ತರಗತಿ ಓದುತ್ತಿದ್ದ ಈ ಬಾಲಕಿ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದಳು. ಆರೋಪಿಯು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಆಕೆಯನ್ನು ನೀರಿನ ಡ್ರಮ್ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಇಡೀ ರಾತ್ರಿ ಬಾಲಕಿಯ ಶವವನ್ನು ತನ್ನ ಕೋಣೆಯಲ್ಲೇ ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ.
ಪೊಲೀಸರ ತಪಾಸಣೆ ಮತ್ತು ವಿಳಂಬ: ಬಾಲಕಿ ನಾಪತ್ತೆಯಾದ ದೂರು ಬಂದ ತಕ್ಷಣ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಶೋಧ ಕಾರ್ಯ ಆರಂಭಿಸಿದ್ದರು. ರಾತ್ರಿ 1:30ರ ಸುಮಾರಿಗೆ ಪೊಲೀಸರು ಸಂಶಯದ ಮೇಲೆ ಆರೋಪಿಯ ಮನೆಗೆ ಹೋಗಿದ್ದರಾದರೂ, ಆತ ಕಿಟಕಿಯ ಮೂಲಕ ಮಲಗಿರುವುದನ್ನು ಕಂಡು ಅಲ್ಲಿಂದ ವಾಪಸ್ ಬಂದಿದ್ದರು. ಆದರೆ ಮರುದಿನ ಬೆಳಿಗ್ಗೆ ಬಂದು ಬಾಗಿಲು ಮುರಿದು ತಪಾಸಣೆ ನಡೆಸಿದಾಗ ಡ್ರಮ್ನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. “ಪೊಲೀಸರು ರಾತ್ರಿಯೇ ಮನೆಯೊಳಗೆ ನುಗ್ಗಿ ತಪಾಸಣೆ ಮಾಡಿದ್ದರೆ ಬಾಲಕಿಯ ಪ್ರಾಣ ಉಳಿಯುತ್ತಿತ್ತು” ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೆದ್ದಾರಿ ತಡೆದು ಪ್ರತಿಭಟನೆ: ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸಾವಿರಾರು ಜನರು ಮದನಪಲ್ಲೆ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಆರೋಪಿಯನ್ನು ತಮಗೆ ಒಪ್ಪಿಸುವಂತೆ ಪಟ್ಟು ಹಿಡಿದರು. ಮರಣೋತ್ತರ ಪರೀಕ್ಷೆಗೆ ಶವವನ್ನು ತೆಗೆದುಕೊಂಡು ಹೋಗಲು ಪೋಷಕರು ನಿರಾಕರಿಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು ಮನವೊಲಿಸಿ ಶವವನ್ನು ಆಸ್ಪತ್ರೆಗೆ ರವಾನಿಸಿದರು.ಈ ಕೃತ್ಯದ ಬೆನ್ನಲ್ಲೇ ಗ್ರಾಮದ ಸಮೀಪವಿರುವ ನೀರಿನ ಟ್ಯಾಂಕ್ ಬಳಿ ಮತ್ತೊಂದು ಶವ ಪತ್ತೆಯಾಗಿದೆ. ಈ ಶವವು ಆರೋಪಿ ಕುಲವರ್ಧನ್ನದ್ದೇ ಇರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

