ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ. ಬೆಂಗಳೂರು ನಗರದಿಂದ ಕಸ ಕೊಂಡೊಯ್ಯುವ ಲಾರಿಗಳಿಗೆ ಗ್ರಾಮಸ್ಥರು ತಡೆಯೊಡ್ಡಿದ್ದು, ಕಸತುಂಬಿರುವ ವಾಹನಗಳು ಬೆಂಗಳೂರು ಹೊರವಲಯದಲ್ಲಿ ಕಿಲೋಮೀಟರ್ ಗಟ್ಟಲೇ ಸಾಲು ಸಾಲಾಗಿ ನಿಂತಿವೆ.
ಗ್ರಾಮಸ್ಥರು ಕಸದ ವಾಹನಗಳನ್ನು ತಡೆದಿರುವುದರಿಂದ ಕಸ ಸಂಗ್ರಹಣೆ ವ್ಯತ್ಯಯವಾಗುತ್ತಿದ್ದು, ಡಂಪಿಂಗ್ ಯಾರ್ಡ್‌ಗಳಿಗೆ ಸಾಗಾಟ ಸದ್ಯ ಸ್ಥಗಿತವಾಗಿದೆ ಇದು ನಗರದಲ್ಲಿ ತ್ಯಾಜ್ಯ ನಿರ್ವಹಣೆ ಮೇಲೆ ಪರಿಣಾಮ ಬೀರಲಿದೆ.
ಪೌರಕಾರ್ಮಿಕರು ಕಸ ಸಂಗ್ರಹದ ವಾಹನಗಳಲ್ಲಿ ಬಂದು ಕಸ ತೆಗೆದುಕೊಂಡು ಹೋಗದಿದ್ದರೆ ಒಂದೇ ದಿನದಲ್ಲಿ ಮತ್ತೆ ಎಲ್ಲೆಂದರಲ್ಲಿ ಕಸದ ರಾಶಿಗಳು, ಗಬ್ಬೆದ್ದು ನಾರಲು ಶುರುವಾಗುತ್ತದೆ. ರಸ್ತೆ ರಸ್ತೆಗಳಲ್ಲೂ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ. ಪ್ರತಿನಿತ್ಯ ಬೆಂಗಳೂರು ನಗರದಾದ್ಯಂತ ಸಂಗ್ರಹವಾಗುವ ಸಾವಿರಾರು ಟನ್ ಕಸವನ್ನು ವಿಲೇವಾರಿ ಮಾಡುವುದೇ ದೊಡ್ಡ ಸವಾಲು. ಇಂಥಹ ಸಂದರ್ಭದಲ್ಲಿ ಕಸದ ಲಾರಿಗಳಿಗೆ ಗ್ರಾಮಸ್ಥರು ತಡೆಯೊಡ್ಡಿ ಪ್ರತಿಭಟನೆ ನಡೆಸುತ್ತಿರುವುದು ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರಿನ ಕಸವನ್ನು ತುಂಬಿಕೊಂಡು ವಿಲೇವಾರಿಗೆ ಹೊರಟ್ಟಿದ್ದ ಲಾರಿಗಳಿಗೆ ಬಾಗಲೂರು ಹಾಗೂ ದೊಡ್ಡಬಳ್ಳಾಪುರದಲ್ಲಿ ಗ್ರಾಮಸ್ಥರು ತಡೆಯೊಡ್ಡಿದ್ದಾರೆ. ಮಹದೇವಪುರ ವ್ಯಾಪ್ತಿಯ ಮಿಟ್ಟಗಾನಹಳ್ಳಿ, ಬೆಳ್ಳಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ತೆರಳುತ್ತಿದ್ದ ಲಾರಿಗಳಿಗೆ ಅಲ್ಲಿನ ಸ್ಥಳೀಯರು ಕೂಡ ದಿಗ್ಬಂಧನ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಕಸ ಸುರಿಯುವಂತಿಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಕಸ ತುಂಬಿರುವ ಲಾರಿಗಳು ಕಿಲೋ ಮೀಟರ್ ಗಟ್ಟಲೇ ನಿಂತಲ್ಲೇ ನಿಂತಿವೆ.
2 ವರ್ಷಗಳಿಂದ ಗ್ರಾಮ ಅಭಿವೃದ್ಧಿ ನಿಧಿ ಕೊಡಲಿಲ್ಲ ಎಂದು ಜಿಬಿಎ ವಿರುದ್ಧ ಮಿಟ್ಟಗಾನಹಳ್ಳಿ, ಬೆಳ್ಳಹಳ್ಳಿ ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ. ಸ್ಥಳೀಯ ಶಾಸಕಿ ಮಂಜುಳ ಅರವಿಂದ ಲಿಂಬಾವಳಿ ಸೂಚನೆ ಮೇರೆಗೆ ಗ್ರಾಮಸ್ಥರು ಕಸದ ಲಾರಿಗಳನ್ನು ತಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಗ್ರಾಮಸ್ಥರ ಪ್ರತಿಭಟನೆ ಮುಂದುವರಿದಿದ್ದೇ ಆದಲ್ಲಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಉಲ್ಬಣವಾಗುವುದು ನಿಶ್ಚಿತವಾಗಿದೆ.
ಬಾಗಲೂರು ರಸ್ತೆಯಲ್ಲಿ ಬಾಲಕನ ದುರ್ಮರಣ ಬಳಿಕ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ಕಸ ಸಾಗಿಸುತ್ತಿದ್ದ ಲಾರಿಗೆ ತಡೆಯೊಡ್ಡಿದ್ದಾರೆ. ಹೀಗಾಗಿ ಗಾರ್ಬೆಜ್ ತುಂಬಿದ ಲಾರಿಗಳು ನಿಂತಲ್ಲೇ ನಿಲ್ಲುವಂತಾಗಿವೆ. ಇನ್ನು ಮಿಟ್ಟಗಾನಹಳ್ಳಿ, ಬೆಳ್ಳಹಳ್ಳಿ ಗ್ರಾಮಗಳಲ್ಲಿ ಕಸ ವಿಲೇವಾರಿಗೆ ಬ್ರೇಕ್ ಬೀಳುತ್ತಿದ್ದಂತೆಯೇ, ಹೆಚ್ಚುವರಿಯಾಗಿ 400 ಗಾಡಿಗಳನ್ನು ದೊಡ್ಡಬಳ್ಳಾಪುರದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳಿಸಲು ಪ್ಲ್ಯಾನ್ ಮಾಡಲಾಗಿತ್ತು. ಇದನ್ನು ಅರಿತ ಶಾಸಕ ಧೀರಜ್ ಮುನಿರಾಜು ಮಂಕಲಾಳ ಬಳಿ ಕಸದ ಲಾರಿಗಳಿಗೆ ತಡೆಯೊಡ್ಡಿದ್ದಾರೆ. 300ಕ್ಕೂ ಹೆಚ್ಚು ಕಸ ತುಂಬಿದ ಲಾರಿಗಳು ಸಾಲುಗಟ್ಟಿ ನಿಂತಲ್ಲೇ ನಿಂತಿವೆ. ಇದರಿಂದಾಗಿ ಬೆಂಗಳೂರಿನಲ್ಲಿ ಮತ್ತೆ ಗಾರ್ಬೇಜ್ ಸಮಸ್ಯೆ ಆರಂಭವಾಗುವ ಸಾಧ್ಯತೆ ಇದೆ.

