ಬೆಂಗಳೂರು: ಮುಂದಿನ ಮೂರು ತಿಂಗಳೊಳಗೆ ಸಕ್ರಮ ಮಾಡಿಕೊಳ್ಳದ ಅಕ್ರಮ ಪಂಪ್ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯ ಎನ್. ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದು ವಿದ್ಯುತ್ ಪರಿವರ್ತಕಕ್ಕೆ ಎರಡರಿಂದ ಮೂರು ಪಂಪ್ಸೆಟ್ ಹಾಕಬಹುದು. ಆದರೆ, ಹತ್ತಾರು ಅಕ್ರಮ ಪಂಪ್ಸೆಟ್ ಬಳಕೆ ಮಾಡುತ್ತಿದ್ದು, ಪರಿವರ್ತಕಗಳು ಸುಟ್ಟು ಹೋಗುತ್ತಿವೆ. ಹೀಗಾಗಿ ಟಿಸಿ ದುರಸ್ತಿ ಮತ್ತು ಬದಲಾವಣೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಲು ಮೂರು ತಿಂಗಳ ಗಡುವು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 4.50 ಲಕ್ಷ ಕೃಷಿ ಪಂಪ್ ಸೆಟ್ ಗಳಿದ್ದು, 2.75 ಲಕ್ಷ ಸಕ್ರಮಗೊಳಿಸಲಾಗಿದೆ. ಮೂರು ತಿಂಗಳ ಒಳಗೆ ರೈತರು ಅಗತ್ಯ ಶುಲ್ಕ ಪಾವತಿಸಿ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

