ಬೆಂಗಳೂರು: ರಾಜ್ಯದ ಪ್ರಕಾಶಕರ ಸಂಕಷ್ಟ ನನ್ನ ಗಮನಕ್ಕೆ ಬಂದಿದೆ. ಪ್ರಕಾಶಕರ ಹಿತಕಾಯಲು ಸಗಟು ಖರೀದಿ ಯೋಜನೆಗಾಗಿ ಮುಂದಿನ ದಿನಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದ್ದಾರೆ.
ಗೃಹ ಕಚೇರಿಯಲ್ಲಿ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಉತ್ತಮ ಕೆಲಸ ಮಾಡುತ್ತಿದೆ, ಪುಸ್ತಕ ಪ್ರೀತಿ ಎಂಬುದನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ,ಅವು ನಮ್ಮ ಜ್ಞಾನಾರ್ಜನೆಗೆ ನೆರವಾಗುತ್ತದೆ ಇಂತಹ ಪುಸ್ತಕ ಪ್ರೀತಿಯ ಫಲವಾಗಿಯೇ ಸಾಹಿತಿಗಳು ಪ್ರಕಾಶಕರು ಹಾಗೂ ಪುಸ್ತಕೋದ್ಯಮ ಜೀವಂತವಾಗಿರಲು ಸಾಧ್ಯ .ಆ ನಿಟ್ಟಿನಲ್ಲಿ ಪುಸ್ತಕ ಪ್ರೇಮ ದೊಡ್ಡ ರೀತಿಯಲ್ಲಿ ಆಂದೋಲನವಾಗಿ ಬೆಳೆಯಬೇಕಿದೆ, ಅದಕ್ಕೆ ಪುಸ್ತಕ ಪ್ರಾಧಿಕಾರದ ಈ ಯೋಜನೆ ಪೂರಕವಾಗಲಿ ಎಂದರು.
ಸಚಿವರ ಮನೆಯ ಗ್ರಂಥಾಲಯ ಅನುಷ್ಠಾನದ ಪ್ರಶಂಸಾ ಪತ್ರವನ್ನು ಸಚಿವರಿಗೆ ನೀಡಿದ ಹಿರಿಯ ಸಾಹಿತಿ ಹಾಗೂ ಮಾಜಿ ಸಚಿವೆ ಡಾ. ಬಿ ಟಿ ಲಲಿತ ನಾಯಕ್, ಪುಸ್ತಕ ಮನುಷ್ಯನನ್ನು ಮೃಗತ್ವದಿಂದ ಮಾನವತ್ವದ ಕಡೆಗೆ ಕೊಂಡೊಯುತ್ತದೆ , ಪಾಶ್ಚತ್ಯ ದೇಶಗಳಲ್ಲಿರುವ ಪುಸ್ತಕ ಪ್ರೀತಿ ನಮಗೆ ಮಾದರಿಯಾಗಿದೆ, ನಮ್ಮದು ಧರ್ಮಾಧಾರಿತ ಸಮಾಜವಾಗಿದೆ ಇದನ್ನು ಮಾನವ ಧರ್ಮವಾಗಿ ರೂಪಿಸುವ ಹೊಣೆಗಾರಿಕೆ ಪುಸ್ತಕಗಳ ಮೇಲಿದೆ ಎಂದರು.
ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಯೋಚನೆಯ ಮೂಲಕ ಪುಸ್ತಕ ಪ್ರಕಾಶಕರು, ಸಾಹಿತಿಗಳಿಗೆ ನೆರವಾಗಲು ಹೊರಟಿದ್ದಾರೆ ಇದೊಂದು ಉತ್ತಮ ಯೋಜನೆ ಈ ಯೋಜನೆ ಯಶಸ್ವಿಯಾಗಲಿ ಎಂದು ಹಾರೈಸಿದರು.

