ಕನ್ನಡದ ಸ್ಟಾರ್ ನಟ, ನೂರಾರು ಸಿನಿಮಾಗಳಲ್ಲಿ ನಟಿಸಿ ಸೆಂಚುರಿ ಸ್ಟಾರ್ ಎನಿಸಿಕೊಂಡ ಶಿವರಾಜ್‌ಕುಮಾರ್ ಜೈಲರ್ ಸಿನಿಮಾದ ಬಳಿಕ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಚಿತ್ರಗಳಲ್ಲಿಯೂ ನಟಿಸುತ್ತಿದ್ದು, ಅಲ್ಲಿ ಅಪಾರವಾದ ಬೇಡಿಕೆ ಪಡೆದುಕೊಂಡಿದ್ದಾರೆ.
ಜೈಲರ್ ಸಿನಿಮಾದಲ್ಲಿ ಶಿವಣ್ಣ ನಿರ್ವಹಿಸಿದ್ದ ಅತಿಥಿ ಪಾತ್ರ ಮಾಡಿದ ಇಂಪ್ಯಾಕ್ಟ್ ಎಷ್ಟರ ಮಟ್ಟಿಗೆ ಇತ್ತೆಂದರೆ ಇದೊಂದು ಪಾತ್ರ ಇಂದು ಶಿವಣ್ಣ ಅವರನ್ನು ಈ ಮಟ್ಟಿಗೆ ಕರೆತಂದಿದೆ. ಮೆಗಾ ಪವರ್‌ಸ್ಟಾರ್ ರಾಮ್‌ಚರಣ್, ಧನುಷ್ ರೀತಿಯ ದೊಡ್ಡ ಸ್ಟಾರ್ ನಟರ ಚಿತ್ರಗಳಿಗೂ ಶಿವಣ್ಣ ಬೇಕು ಎನ್ನುವ ಮಟ್ಟಕ್ಕೆ ಫೇಮ್ ತಂದಿದೆ.
ಹೀಗೆ ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿ ಅಬ್ಬರಿಸುತ್ತಿರುವ ಶಿವರಾಜ್‌ಕುಮಾರ್ ಕನ್ನಡದಲ್ಲಿಯೂ ಸಹ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಕಬ್ಜ ಬಳಿಕ ಮತ್ತೆ ಆರ್ ಚಂದ್ರು ಜತೆ ಸಿನಿಮಾವೊಂದನ್ನು ಮಾಡಲು ಕೈ ಜೋಡಿಸಿದ್ದಾರೆ.
ಈ ಚಿತ್ರಕ್ಕೆ OM ( ಒರಿಜಿನಲ್ ಮಾನ್ಸ್ಟರ್ ) ಎಂಬ ಶೀರ್ಷಿಕೆಯನ್ನು ಇಡಲಾಗಿದ್ದು, ಈ ಚಿತ್ರದ ಮೂಲಕ ಶಿವಣ್ಣ ಬಾಲಿವುಡ್ ಪ್ರವೇಶವನ್ನೂ ಸಹ ಮಾಡಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರವನ್ನು ಕನ್ನಡದ ಜತೆಗೆ ಹಿಂದಿಗೂ ಸಹ ಡಬ್ ಮಾಡಿ ದೊಡ್ಡದಾಗಿ ಬಿಡುಗಡೆ ಮಾಡಲು ಸಜ್ಜಾಗಿದ್ದು, ನಿನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಹಿಂದಿ ಡಬಿಂಗ್ ಕುರಿತು ಪ್ರಶ್ನೆಗಳು ಎದ್ದವು.
ಹಿಂದಿಗೂ ಸಹ ಚಿತ್ರ ಡಬ್ ಆಗುತ್ತಿರುವುದರಿಂದ ಶಿವಣ್ಣ ಇದಕ್ಕೆ ಹೇಗೆ ತಯಾರಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಯಾಕೆ? ನನ್ನ ಸೆಕೆಂಡ್ ಲಾಂಗ್‌ವೇಜ್ ಹಿಂದಿ. ಮೇ ಹಿಂದಿ ಬಾತ್ ಕರ್ ಸಕ್ತಾ ಹು ಯಾರ್. ಹಿಂದಿ ಸುಲಭದ ಭಾಷೆ ರೀ, ರಾಷ್ಟ್ರೀಯ ಭಾಷೆ ಬರದೇ ಏನು ಬರುತ್ತೆ ಬಿಡಿ’ ಎಂದಿದ್ದಾರೆ.
ಹೀಗೆ ಶಿವರಾಜ್‌ಕುಮಾರ್ ಹಿಂದಿ ಡಬಿಂಗ್ ನೀವೇ ಮಾಡ್ತೀರ, ಹಿಂದಿ ಮಾತನಾಡಲು ಆಗುತ್ತಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವ ಭರದಲ್ಲಿ ಹಿಂದಿ ರಾಷ್ಟ್ರ ಭಾಷೆ ಎಂದಿರುವುದು ಅಪ್ಪಟ ಕನ್ನಡಿಗರನ್ನು ಕೆರಳಿಸಿದೆ. ಈ ವಿಡಿಯೊಗಳ ಕಾಮೆಂಟ್‌ನಲ್ಲೇ ಹಲವಾರು ಮಂದಿ ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಈ ವಿಡಿಯೊನ ಈ ಭಾಗವನ್ನು ಕತ್ತರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ನೆಟ್ಟಿಗರು ‘ಏನ್ ಶಿವಣ್ಣ ಹಿಂದಿ ರಾಷ್ಟ್ರ ಭಾಷೆ ಅಂದ್ರೆ ಏನು ಅರ್ಥ’ ಎಂದು ಪ್ರಶ್ನಿಸಿದ್ದಾರೆ.
ಕನ್ನಡಿಗರ ಹಲವು ದಿನಗಳ ಸಮಸ್ಯೆ ‘ಹಿಂದಿ ರಾಷ್ಟ್ರ ಭಾಷೆ’
ಹಿಂದಿ ರಾಷ್ಟ್ರ ಭಾಷೆ ಎನ್ನುವುದರ ವಿರುದ್ಧ ಕನ್ನಡಿಗರು ಈ ಮಟ್ಟದಲ್ಲಿ ಕಿರಿಕಾರುವುದರ ಹಿಂದೆ ಬಲವಾದ ಕಾರಣವಿದೆ. ಕನ್ನಡದ ನೆಲದಲ್ಲಿ ಹಿಂದಿ ಭಾಷಿಕರು ನೆಲೆಸಿದ್ದು, ಅವರು ಹಾಗೂ ಕನ್ನಡಿಗರ ನಡುವೆ ಅನೇಕ ಬಾರಿ ಮಾತನಾಡುವ ವಿಷಯಕ್ಕೆ ಜಗಳ ನಡೆದಿದ್ದು, ಈ ಸಂದರ್ಭದಲ್ಲಿ ಹಿಂದಿ ಜನರು ಹಿಂದಿ ಒಂದು ರಾಷ್ಟ್ರ ಭಾಷೆ ಅದನ್ನು ದೇಶದಾದ್ಯಂತ ಮಾತನಾಡಬಹುದು, ಮಾತನಾಡಬೇಕು ಎಂದ ಹಲವಾರು ನಿದರ್ಶನಗಳಿವೆ. ಅದರಲ್ಲೂ ಹೆಚ್ಚಾಗಿ ಕನ್ನಡ ಮಾತ್ರ ಬಲ್ಲ ಜನರು ಬ್ಯಾಂಕ್‌ಗಳಿಗೆ ತೆರಳಿದಾಗ ಅಲ್ಲಿನ ಸಿಬ್ಬಂದಿ ಹಿಂದಿಯಲ್ಲಿ ವ್ಯವಹರಿಸಿ ಹಿಂದಿ ಹೇರಿಕೆ ಮಾಡಿದ್ದು ಕನ್ನಡಿಗರಲ್ಲಿ ಹಿಂದಿ ಭಾಷೆ ನಮ್ಮ ನೆಲದಲ್ಲಿ ಒಂದು ಸಮಸ್ಯೆ ಎಂಬ ಮನೋಭಾವ ಮೂಡುವಂತೆ ಮಾಡಿದೆ.
ಭಾರತಕ್ಕೆ ಯಾವುದೇ ರಾಷ್ಟ್ರ ಭಾಷೆ ಇಲ್ಲ
ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಹಲವಾರು ಭಾಷೆಗಳಿದ್ದು, ಒಂದೊಂದು ರಾಜ್ಯದಲ್ಲೂ ಒಂದೊಂದು ಭಾಷೆ ಇದೆ. ಕರ್ನಾಟಕದಲ್ಲಿ ಕನ್ನಡ, ತಮಿಳುನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲಯಾಳಂ ಹೇಗೋ ಹಾಗೆಯೇ ಹಿಂದಿ ಕೂಡ ಭಾರತದ ಒಂದು ಭಾಷೆಯೇ ಹೊರತು ಅದು ರಾಷ್ಟ್ರ ಭಾಷೆ ಅಲ್ಲವೇ ಅಲ್ಲ.

