HomeKarnatakaಶಿವಮೊಗ್ಗ : ಲಿಂಗಪತ್ತೆ, ಭ್ರೂಣಹತ್ಯೆಯ ರಹಸ್ಯ ತಿಳಿಯಲು ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಭೇಟಿ ನೀಡಿ, ವೈದ್ಯಾಧಿಕಾರಿಗಳಿಗೆ...

ಶಿವಮೊಗ್ಗ : ಲಿಂಗಪತ್ತೆ, ಭ್ರೂಣಹತ್ಯೆಯ ರಹಸ್ಯ ತಿಳಿಯಲು ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಭೇಟಿ ನೀಡಿ, ವೈದ್ಯಾಧಿಕಾರಿಗಳಿಗೆ ಡಿಸಿ ಸೂಚನೆ

ಶಿವಮೊಗ್ಗ : ಜಿಲ್ಲೆಯಲ್ಲಿ ಪ್ರಸವಪೂರ್ವ ಲಿಂಗಪತ್ತೆ ಮತ್ತು ಭ್ರೂಣಹತ್ಯೆ ಪ್ರಕರಣಗಳು ಗೌಪ್ಯವಾಗಿ ನಿರಂತರವಾಗಿ ನಡೆಯುತ್ತಿವೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕಾಗಿದ್ದ ಸ್ಕ್ಯಾನಿಂಗ್ ಸೆಂಟರ್ಗಳು ಸರ್ಕಾರದ ನಿಯಮಗಳನ್ನು ನಿರ್ಲಕ್ಷಿಸಿ ಕಾರ್ಯನಿರ್ವಹಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಪ್ರಸವಪೂರ್ವ ಲಿಂಗ ಪತ್ತೆ, ಭ್ರೂಣಹತ್ಯೆ ಮತ್ತು ಸ್ಕ್ಯಾನಿಂಗ್ ಸೆಂಟರ್ಗಳ ಕಾರ್ಯವೈಖರಿಗಳ ಕುರಿತು ಏರ್ಪಡಿಸಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿನ ಸ್ಕ್ಯಾನಿಂಗ್ ಸೆಂಟರ್ಗಳ ಕಾರ್ಯವೈಖರಿ ಹಾಗೂ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ಆರೋಪಗಳಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ಕೂಡಲೇ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಹಾಗೂ ಸಲಹಾ ಸಮಿತಿಯ ಸದಸ್ಯರು ವಾರಕ್ಕೊಮ್ಮೆಯಂತೆ ನಗರ ವ್ಯಾಪ್ತಿಯಲ್ಲಿ ಮಾತ್ರವಲ್ಲದೇ ಜಿಲ್ಲೆಯ ಯಾವುದೇ ತಾಲೂಕುಗಳ ಸ್ಕ್ಯಾನಿಂಗ್ ಸೆಂಟರ್ಗಳಿಗೆ ಹಾಗೂ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ, ದಾಖಲೆಗಳನ್ನು ಪರಿಶೀಲಿಸಿ, ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವಂತೆ ಅವರು ಸೂಚಿಸಿದರು.
ಯಾವುದೇ ಅಹಿತಕರ ಘಟನೆಗಳು ತಿಳಿದು ನಂತರ ಅವುಗಳ ಕುರಿತು ಕ್ರಮ ವಹಿಸುವ ಮೊದಲು ಮುನ್ನೆಚ್ಚರಿಕೆ ವಹಿಸುವುದು ಉತ್ತಮ, ಸಂಬಂಧಿತ ಇಲಾಖಾ ಅಧಿಕಾರಿಗಳು ಕೂಡಲೇ ಕ್ರಮವಹಿಸುವಂತೆ ಹಾಗೂ ಕೈಗೊಂಡ ಕ್ರಮದ ಬಗ್ಗೆ ಕೂಡಲೇ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಈ ಅವಧಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳ ಜೊತೆಗೆ ಆಶಾ, ಅಂಗನವಾಡಿ ಕಾರ್ಯಕರ್ತರ ಸಹಕಾರ ಪಡೆದುಕೊಳ್ಳುವಂತೆ ತಿಳಿಸಿದ ಅವರು, ಆಶಾ ಕಾರ್ಯಕರ್ತೆಯರು ಸ್ಥಳೀಯವಾಗಿರುವ ಅನೇಕ ವಿಷಯಗಳನ್ನು ಬಲ್ಲವರಾಗಿರುತ್ತಾರೆ ಎಂದವರು ನುಡಿದರು.ಸ್ಕ್ಯಾನಿಂಗ್ ನಂತರ ಕೆಲವೇ ದಿನಗಳಲ್ಲಿ ಗರ್ಭಪಾತವಾಗಿರುವ ಪ್ರಕರಣಗಳ ಮೂಲ ಹಾಗೂ ಕಾರಣಗಳನ್ನು ಹುಡುಕಿದಾಗ ವಾಸ್ತವದ ಅರಿವಾಗಲಿದೆ. ಅವರು ನೀಡುವ ಕಾರಣ ವೈಜ್ಞಾನಿಕವಾಗಿದ್ದಲ್ಲಿ ಒಪ್ಪಿಕೊಳ್ಳಬಹುದಾಗಿದೆ. ಅಥವಾ ಅದು ಸಕಾರಣವಲ್ಲ ಎಂದು ತಿಳಿದಾಗ ಅಂತಹ ಗರ್ಭಪಾತಕ್ಕೆ ಸಹಕರಿಸಿದ ವೈದ್ಯರು, ಸ್ಕ್ಯಾನಿಂಗ್ ಸೆಂಟರ್ಗಳ ನಿರ್ವಾಹಕರು ಮತ್ತು ಅಂತಹ ಕುಟುಂಬಗಳ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಕೇಂದ್ರದಲ್ಲಿ ಕ್ಯಾಮರಾಗಳನ್ನು ಅಳವಡಿಸಿರಬೇಕು. ಭ್ರೂಣ ಪತ್ತೆ ಮಾಡದಿರುವ ಬಗ್ಗೆ ಮಾಹಿತಿ ಫಲಕ ಅಳವಡಿಸಬೇಕು. ಮುಂತಾದ ಮಾಹಿತಿಗಳಿರುವುದನ್ನು ಖಚಿತಪಡಿಸಿಕೊಳ್ಳುವಂತೆ ವೈದ್ಯರಿಗೆ ಸೂಚಿಸಿದರು.

ಸ್ಕ್ಯಾನಿಂಗ್ ಸೆಂಟರ್ಗಳ ನಿರ್ವಾಹಕರು ಸಕಾಲದಲ್ಲಿ ತಮ್ಮ ಘಟಕದ ಪರವಾನಗಿ ನವೀಕರಣ ಮತ್ತು ನಿರ್ವಹಿಸಿದ ದಾಖಲೆಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಸಲ್ಲಿಸಬೇಕು. ನಿರ್ಲಕ್ಷ್ಯ ತೋರುವ ಘಟಕಗಳ ಪರವಾನಿಗೆಯನ್ನು ರದ್ದುಗೊಳಿಸುವ ಕಠಿಣ ನಿರ್ಧಾರ ಕೈಗೊಳ್ಳಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ವೈದ್ಯರು ಹಾಗೂ ಸ್ಕ್ಯಾನಿಂಗ್ ಸೆಂಟರ್ಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಅಗತ್ಯವಿದ್ದಲ್ಲಿ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು.

ಕೆಲವು ಕಡೆಗಳಲ್ಲಿ ಆಯುಷ್ ಇಲಾಖೆಯ ವೈದ್ಯರು ಆಯುಷ್ ಬದಲಾಗಿ ಆಲೋಪತಿ ಚಿಕಿತ್ಸೆ ನೀಡುತ್ತಿರುವ ಬಗ್ಗೆಯೂ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈ ಬಗ್ಗೆ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು ಗಮನಿಸಿ ಕ್ರಮವಹಿಸಬೇಕೆಂದು ಅವರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ, ಕುಟುಂಬ ಕಲ್ಯಾಣಾಧಿಕಾರಿ ವೆಂಕಟೇಶ್, ಡಾ|| ಮಂಜುನಾಥ ನಾಗಲೀಕರ್ ಸೇರಿದಂತೆ ಎಲ್ಲಾ ತಾಲೂಕುಗಳ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular