ಶಿವಮೊಗ್ಗ: ಶಿವಮೊಗ್ಗದ ವಿದ್ಯಾನಗರ ಬಡಾವಣೆಯಲ್ಲಿನ ನಾಲ್ಕನೇ ಕ್ರಾಸ್ ನಲ್ಲಿರುವ ಪಿಡಿಒ ದಂಪತಿ ಮನೆಯಲ್ಲಿ ಹಾಡಹಗಲೇ 1.42 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಲಾಗಿದೆ.
ಆಗಸ್ಟ್ 28 ರಂದು ಶುಕ್ರವಾರ ಘಟನೆ ನಡೆದಿದೆ. ಪಿಡಿಒ ನಟರಾಜ್ ಮತ್ತು ಅವರ ಪತ್ನಿ ಆಗಸ್ಟ್ 28ರಂದು ಶುಕ್ರವಾರ ಬೆಳಗ್ಗೆ ಕರ್ತವ್ಯಕ್ಕೆ ತೆರಳಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳ ಮನೆಯ ಬೀಗ ಮುರಿದು ಒಳಗೆ ಪ್ರವೇಶಿಸಿದ್ದಾನೆ. 1.42 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ನಗದು ದೋಚಿ ಪರಾರಿಯಾಗಿದ್ದಾನೆ. ನಟರಾಜ್ ಅವರ ಪುತ್ರಿ ಸಂಜೆ ಮನೆಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಮನೆಯಲ್ಲಿದ್ದ 943 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ಆಭರಣ ಮತ್ತು ವಸ್ತುಗಳು, 1.5 ಲಕ್ಷ ರೂ. ಮೌಲ್ಯದ 15 ಕೈಗಡಿಯಾರಗಳು, 86 ಸಾವಿರ ರೂಪಾಯಿ ನಗದು ದೋಚಲಾಗಿದೆ. ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳ ಪರಾರಿಯಾದ ದೃಶ್ಯ ಸೆರೆಯಾಗಿದೆ. ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.

