ಶಿವಮೊಗ್ಗ: ಅಡಿಕೆ ಬೇಯಿಸುವ ವೇಳೆ ಕುದಿಯುತ್ತಿದ್ದ ಹಂಡೆಯೊಳಗೆ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೃತರನ್ನು ವಡ್ಡಿನಕೊಪ್ಪದ ಜೇನು ಕುಮಾರ್ ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 8ರಂದು ಜೇನು ಕುಮಾರ್ ಅವರು ತಮ್ಮ ಮನೆಯ ಸಮೀಪದ ಶೆಡ್‌ನಲ್ಲಿ ಅಡಿಕೆ ಬೇಯಿಸುತ್ತಿದ್ದರು. ಬಳಿಕ ಹಂಡೆಯಿಂದ ಅಡಿಕೆಯನ್ನು ಹೊರತೆಗೆದು, ಅದರಲ್ಲಿದ್ದ ಅಡಿಕೆ ಚೊಗರು ತೆಗೆಯಲು ಪಕ್ಕದಲ್ಲಿದ್ದ ಕಟ್ಟೆಯ ಮೇಲೆ ಏರಿದ್ದರು. ಈ ವೇಳೆ ಕಾಲು ಜಾರಿ ಕುದಿಯುತ್ತಿದ್ದ ಹಂಡೆಯೊಳಗೆ ಬಿದ್ದಿದ್ದಾರೆ.
ಕೂಡಲೇ ಅಲ್ಲಿದ್ದ ಮೂವರು ಅವರನ್ನು ಹಂಡೆಯಿಂದ ಮೇಲಕ್ಕೆತ್ತಿದ್ದಾರೆ. ಬಳಿಕ ಜೇನು ಕುಮಾರ್ ಶೆಡ್‌ನಿಂದ ಹೊರಗೆ ಓಡಿ, ತಮ್ಮ ಶರ್ಟ್ ತೆಗೆದು ಮತ್ತೆ ಶೆಡ್‌ನೊಳಗೆ ಬಂದಿದ್ದಾರೆ. ಈ ವೇಳೆ ಅವರ ದೇಹದ ಬಹುತೇಕ ಭಾಗ ಸುಟ್ಟಿತ್ತು ಎಂದು ವರದಿಯಾಗಿದೆ.
ತಕ್ಷಣ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಅವರನ್ನು ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಜೇನು ಕುಮಾರ್ ಮೃತಪಟ್ಟಿದ್ದಾರೆ.
ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವ್ಯಾನ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ
ಗಾಜಿಯಾಬಾದ್: ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವ್ಯಾನ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಸುಮಾರು 5 ಅಡಿ ಕೆಳಗಿದ್ದ ಸರ್ವಿಸ್ ರಸ್ತೆಗೆ ಬಿದ್ದ ಘಟನೆ ಗಾಜಿಯಾಬಾದ್‌ನ ವಿಜಯ್ ನಗರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ.
ವಿಜಯ್ ನಗರದ ಡಿಎವಿ ಶಾಲೆ ಸಮೀಪ ಬೆಳಗ್ಗೆ ಸುಮಾರು 7.30ಕ್ಕೆ ಘಟನೆ ನಡೆದಿದೆ. ಶಾಲಾ ವ್ಯಾನ್ ಏಕಾಏಕಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮರವನ್ನು ಮುರಿದುಕೊಂಡು ವ್ಯಾನ್ ಸುಮಾರು 5 ಅಡಿ ಕೆಳಗಿನ ಸರ್ವಿಸ್ ರಸ್ತೆಗೆ ಬಿದ್ದಿದೆ. ಅದೃಷ್ಟವಶಾತ್ ವ್ಯಾನ್ ಪಲ್ಟಿಯಾಗದೇ ನೇರವಾಗಿ ಕೆಳಗೆ ಬಿದ್ದಿದೆ.
ಮಕ್ಕಳ ರಕ್ಷಣೆಗೆ ಧಾವಿಸಿದ ಸ್ಥಳೀಯರು
ವ್ಯಾನ್ ರಸ್ತೆ ಬದಿಯಿಂದ ಕೆಳಗೆ ಬಿದ್ದ ಕೂಡಲೇ ಒಳಗಿದ್ದ ಮಕ್ಕಳು ಭಯಗೊಂಡು ಸಹಾಯಕ್ಕಾಗಿ ಕೂಗಿದ್ದಾರೆ. ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ.
ಘಟನೆ ವೇಳೆ ವ್ಯಾನ್ ಸಮೀಪದಲ್ಲೇ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ವಾಹನ ಬೀಳುವುದನ್ನು ಕಂಡು ಮೊದಲು ದೂರ ಸರಿದಿದ್ದಾರೆ. ಬಳಿಕ ತಕ್ಷಣವೇ ಸ್ಥಳಕ್ಕೆ ಮರಳಿ ವ್ಯಾನ್‌ನ ಕಿಟಕಿಯನ್ನು ತೆರೆದು ಮಕ್ಕಳನ್ನು ಹಾಗೂ ಒಳಗಿದ್ದ ಇತರರನ್ನು ಹೊರಗೆ ಬರಲು ಸಹಾಯ ಮಾಡಿದ್ದಾರೆ. ಸ್ಥಳೀಯ ನಿವಾಸಿಗಳೂ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಯಾವುದೇ ಗಾಯಗಳಿಲ್ಲ
ಘಟನೆಯಲ್ಲಿ ಯಾವುದೇ ಮಗು, ಚಾಲಕ ಅಥವಾ ವ್ಯಾನ್‌ನಲ್ಲಿದ್ದ ಇತರರಿಗೆ ಗಾಯವಾಗಿಲ್ಲ ಎಂದು ವರದಿಯಾಗಿದೆ. ಚಾಲಕ ಕೂಡ ಸುರಕ್ಷಿತವಾಗಿದ್ದಾರೆ.ವ್ಯಾನ್ ಸರ್ವಿಸ್ ರಸ್ತೆಗೆ ಬಿದ್ದ ಬಳಿಕ ಪಲ್ಟಿಯಾಗದಿರುವುದು ದೊಡ್ಡ ಅನಾಹುತ ತಪ್ಪಲು ಕಾರಣವಾಗಿದೆ ಎಂದು ಹೇಳಲಾಗಿದೆ.
ವಿಜಯ್ ನಗರ ಠಾಣೆಯ ಎಸ್‌ಎಚ್‌ಒ ಧರ್ಮಪಾಲ್ ಸಿಂಗ್ ಅವರ ಪ್ರಕಾರ, ಶಾಲಾ ವ್ಯಾನ್ ನಿಯಂತ್ರಣ ಕಳೆದುಕೊಂಡಿರುವುದಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.ವಾಹನ ಹೇಗೆ ತನ್ನ ಮಾರ್ಗದಿಂದ ನಿಯಂತ್ರಣ ತಪ್ಪಿ ಕೆಳಗಿನ ಸರ್ವಿಸ್ ರಸ್ತೆಗೆ ಬಿದ್ದಿತು ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಅಪಘಾತದ ಸಂಪೂರ್ಣ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವ್ಯಾನ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು, ಮರವನ್ನು ಮುರಿದುಕೊಂಡು ಕೆಳಗಿನ ಸರ್ವಿಸ್ ರಸ್ತೆಗೆ ಬೀಳುತ್ತಿರುವುದು ದೃಶ್ಯದಲ್ಲಿ ಕಾಣಿಸುತ್ತದೆ. ವಾಹನ ಬೀಳುವ ವೇಳೆ ಸಮೀಪದಲ್ಲಿದ್ದ ಪಾದಚಾರಿ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿರುವುದೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯಾವುದೇ ಮಕ್ಕಳು ಗಾಯಗೊಂಡಿಲ್ಲ ಎಂಬುದು ತಿಳಿದುಬಂದ ಬಳಿಕ ಹಲವರು ನಿಟ್ಟುಸಿರು ಬಿಟ್ಟಿದ್ದಾರೆ.

