ಶಿವಮೊಗ್ಗ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬಲಪಡಿಸುವುದು ಮತ್ತು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದೇ ತಮ್ಮ ಪ್ರಮುಖ ಗುರಿ ಎಂದು ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಹೆಚ್.ಸಿ.ಯೋಗೇಶ್ ಹೇಳಿದರು.
ನೂತನ ಜಿಲ್ಲಾಧ್ಯಕ್ಷರಾಗಿ ಇಂದು ಕಾಂಗ್ರೆಸ್ ಕಚೇರಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ನಾಯಕರಿಂದ ಸಂಘಟನೆ, ಕಾರ್ಯಕರ್ತರೊಂದಿಗೆ ಬೆರೆಯುವ ರೀತಿ ಹಾಗೂ ಜವಾಬ್ದಾರಿಯನ್ನು ನಿರ್ವಹಿಸುವ ಕುರಿತು ಹಲವು ವಿಷಯಗಳನ್ನು ಕಲಿಯಲು ಸಾಧ್ಯವಾಗಿದೆ ಎಂದ ಅವರು, ರಾಜಕೀಯ ಹಿನ್ನೆಲೆ, ಕುಟುಂಬದ ಬೆಂಬಲ ಇವೆಲ್ಲವೂ ಆರಂಭಿಕ ಹೆಜ್ಜೆಗೆ ನೆರವಾಗಬಹುದು. ಆದರೆ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನವನ್ನು ಪಡೆಯಲು ಹಾಗೂ ಅದನ್ನು ಸಮರ್ಥವಾಗಿ ನಿರ್ವಹಿಸಲು ಕಠಿಣ ಪರಿಶ್ರಮ, ಸಾಮರ್ಥ್ಯ ಮತ್ತು ಪಕ್ಷದ ಮೇಲಿನ ನಿಷ್ಠೆಯೇ ಪ್ರಮುಖ ಮಾನದಂಡ ಎಂದು ಸ್ಪಷ್ಟ ಪಡಿಸಿದರು.
ತಮ್ಮ ರಾಜಕೀಯ ಜೀವನದ ಆರಂಭದ ದಿನಗಳನ್ನು ಸ್ಮರಿಸಿಕೊಂಡ ಅವರು, ತಂದೆಯ ರಾಜಕೀಯ ಪ್ರವೇಶದಿಂದಾಗಿ ತಮಗೆ ರಾಜಕೀಯ ವಾತಾವರಣ ಪರಿಚಯವಾಗಿತ್ತು. ಆದರೆ ೨೦೧೨ರ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಕಾರ್ಯಕರ್ತರು ಹಾಗೂ ಹಿರಿಯ ನಾಯಕರು ನೀಡಿದ ಬೆಂಬಲವೇ ತಮ್ಮ ರಾಜಕೀಯ ಪಯಣಕ್ಕೆ ಮತ್ತಷ್ಟು ಬಲ ನೀಡಿತು ಎಂದು ನೆನಪಿಸಿಕೊಂಡರು.
ಹಿರಿಯರ ಮಾರ್ಗದರ್ಶನವೇ ರಾಜಕೀಯ ಶಾಲೆ ಎಸ್.ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ಹೊಂದಿರುವ ಒಡನಾಟ ಹಾಗೂ ಅವರ ಮಾರ್ಗದರ್ಶನ ತಮ್ಮ ರಾಜಕೀಯ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.
ಯುವಕರಿಗೆ ಹೆಚ್ಚಿನ ಅವಕಾಶ ಅಗತ್ಯ: ಯುವ ಕಾಂಗ್ರೆಸ್ ಸಂಘಟನೆಯಲ್ಲಿ ಕಾರ್ಯನಿರ್ವಹಿಸಿದ ದಿನಗಳನ್ನು ಮೆಲುಕು ಹಾಕಿದ ಅವರು, ಯುವಕರಿಗೆ ಪಕ್ಷದಲ್ಲಿ ಉತ್ತಮ ಅವಕಾಶಗಳಿವೆ. ಆದರೆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ನಿಕಟಪೂರ್ವ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಮಾತನಾಡಿ, ಆಯ್ಕೆಯಲ್ಲಿ ಯಾರೊಬ್ಬರ ವೈಯಕ್ತಿಕ ಒಲವು, ಶಿಫಾರಸು ಅಥವಾ ಫೇವರಿಟಿಸಂಗೆ ಅವಕಾಶ ನೀಡದೆ, ಪಕ್ಷದ ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯಕ್ಕೆ ಆದ್ಯತೆ ನೀಡುವ ಹೊಸ ಸಂಘಟನಾ ವ್ಯವಸ್ಥೆಯನ್ನು ಕೆಪಿಸಿಸಿ ಜಾರಿಗೆ ತಂದಿದೆ.ಆ ಮೂಲಕ ಹೆಚ್. ಸಿ. ಯೋಗೇಶ್ ಅವರನ್ನು ನೇಮಕ ಮಾಡಲಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್‌ನ ಮುಂದಿನ ಸಂಘಟನಾ ಕಾರ್ಯದಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದು ಮುಖ್ಯ. ಹಿರಿಯರ ಅನುಭವ ಹಾಗೂ ಯುವಕರ ಉತ್ಸಾಹವನ್ನು ಸಮನ್ವಯಗೊಳಿಸಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಜವಾಬ್ದಾರಿ ಹೊಸ ನಾಯಕತ್ವದ ಮೇಲಿದೆ ಎಂದು ಕಿವಿ ಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ಭಾನು ಮಾತನಾಡಿ, ಯುವಕರಿಗೆ ಕಾಂಗ್ರೆಸ್ ಪಕ್ಷದಲ್ಲಿ ಆದ್ಯತೆ ನೀಡಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ತಮಗೆ ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಮುಂಬರುವ ಸ್ಥಳೀಯ ಮತ್ತು ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ, ಯೋಗೀಶ್ ಅವರ ಅಧ್ಯಕ್ಷ ಅವಧಿಯಲ್ಲಿ ಪಕ್ಷ ಮತ್ತಷ್ಟು ಗಟ್ಟಿಗೊಳ್ಳಲಿ ಎಂದರು. ಹಿರಿಯ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ಖಾನ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ತನದೇ ಆದ ಶಿಸ್ತು ಬೇಕಾಗಿದೆ. ಮುಂದಿನ ಚುನಾವಣೆಗಳಿಗೆ ಸಂಘಟಿತರಾಬೇಕು ಎಂದು ಕರೆ ನೀಡಿದರು. ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಕಾರ್ಯಕ್ರಮದ ವೇಳೆಯೇ ದೂರವಾಣಿ ಮೂಲಕ ಯೋಗೀಶ್ ಅವರಿಗೆ ಶುಭ ಕೋರಿದರು.
ಜವಳಿ ನಿಗಮದ ಅಧ್ಯಕ್ಷ ಚೇತನಗೌಡ, ಪ್ರಮುಖರಾದ ಚಂದ್ರಭೂಪಾಲ್, ಗ್ರಾಮಾಂತರ ಕ್ಷೇತ್ರದ ಮುಖಂಡ, ಡಾ.ಶ್ರೀನಿವಾಸ ಕರಿಯಣ್ಣ, ಎಸ್.ರವಿಕುಮಾರ್, ಹಾಪ್ಸ್ ಕಾಮ್ಸ್ ಅಧ್ಯಕ್ಷ ವಿಜಯ್‌ಕುಮಾರ್ (ದನಿ), ಎಸ್.ಪಿ.ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶಿವಕುಮಾರ್ ಮತ್ತು ಕಲೀಂಪಾಶ, ಕಾಂಗ್ರೆಸ್ ಮುಖಂಡರಾದ ನೇತ್ರಾವತಿ ಗೌಡ, ಕೆ.ರಂಗನಾಥ್, ಡಾ.ಶರತ್ ಮರಿಯಪ್ಪ, ಹೆಚ್.ಪಿ.ಗಿರೀಶ್, ಸೇರಿದಂತೆ ಹಲವರು ಮಾತನಾಡಿ, ನೂತನ ಅಧ್ಯಕ್ಷ ಯೋಗೀಶ್ ಅವರಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಬಂಡಿ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ರಮೇಶ್ ಶಂಕರ್‌ಘಟ್ಟ, ಪ್ರಮುಖರಾದ ಆರ್.ರಾಜಶೇಖರ್, ನೇತ್ರಾವತಿ ಗೌಡ, ಸೂಡಾ ಸದಸ್ಯ ಎಂ.ಎನ್.ಸಿದ್ದಪ್ಪ, ಕಲಗೋಡು ರತ್ನಾಕರ್, ಯು.ಶಿವಾನಂದ್, ದೇವೇಂದ್ರಪ್ಪ, ಎಸ್.ಟಿ.ಹಾಲಪ್ಪ, ಸ್ಟೆಲ್ವ ಮಾರ್ಟಿನ್, ಶಿವಣ್ಣ, ಮಂಜುನಾಥ್‌ಬಾಬು, ರವಿಕುಮಾರ್, ಸಮೀನ ಕೌಸರ್, ವಿಜಯಲಕ್ಷ್ಮಿ ಪಾಟೀಲ್, ದೇವಿಕುಮಾರ್, ಧೀರರಾಜ್ ಹೊನ್ನವಿಲೆ, ಸಿ.ಹನುಮಂತ್, ಡಿ.ಸಿ.ನಿರಂಜನ್ ಸೇರಿದಂತೆ ಹಲವರಿದ್ದರು.

