ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ವೊಂದು ಮನೆ ಮೇಲೆ ಪಲ್ಟಿಯಾಗಿ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸಕೊಪ್ಪ ಕ್ರಾಸ್ ಬಳಿ ನಡೆದಿದೆ.
ಕೊಲ್ಲೂರುನಿಂದ ಸಿಗಂದೂರು ಕಡೆ ತೆರಳುತ್ತಿದ್ದ ಬಸ್, ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದಿದೆ. ಕಾರ್ಗಲ್-ಹಲಕೊಟ್ಟಿಗೆ ತಿರುವಿನಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ದಾವಣಗೆರೆ ಮೂಲದ ಗಾರ್ಮೆಂಟ್ಸ್ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಗಲ್ ಪೊಲೀದ್ಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಾಲ ತೀರಿಸಲು ಕಿಡ್ನ್ಯಾಪ್ ನಾಟಕ: ತಂದೆಗೆ ಕರೆ ಮಾಡಿ 90 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ ಮಗ
ಬೆಂಗಳೂರು: ಮೈತುಂಬ ಸಾಲ ಮಾಡಿಕೊಂಡಿದ್ದ ಮಗರಾಯನೊಬ್ಬ, ಸಾಲ ತೀರಿಸುವ ಸಲುವಾಗಿ ತಾನು ಕಿಡ್ನ್ಯಾಪ್ ಆಗಿದ್ದಾಗಿ ಕಥೆ ಕಟ್ಟಿ ತಂದೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಬೆಂಗಳೂರಿನ ಆರ್.ಆರ್.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮನೀಷ್ (40) ಎಂಬಾತ ತನ್ನ ತಂದೆ ಮನೋಹರ್ ಪಟೇಲ್ (62) ಅವರಿಗೆ ಸ್ನೇಹಿತರ ಮೂಲಕ ತನ್ನದೇ ನಂಬರ್‌ನಿಂದ ವಾಟ್ಸಾಪ್ ಕರೆ ಮಾಡಿಸಿ, ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ ಎಂದು ಹೇಳಿ ಹೆದರಿಸಿದ್ದ. ಮಗನನ್ನು ಬಿಡಬೇಕು ಎಂದಾದರೆ 90 ಲಕ್ಷ ರೂ. ಹಣ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ.
ಹಿಂದಿನ ದಿನ ಹಣದ ವ್ಯವಹಾರಕ್ಕೆಂದು ರೈಲಿನಲ್ಲಿ ಗದಗಕ್ಕೆ ಹೋಗುವುದಾಗಿ ಹೇಳಿ ಮನೀಷ್ ಹೊರಟಿದ್ದ. ಬೆಳಗ್ಗೆ ಫೋನ್ ಮಾಡ್ತೀನಿ ಎಂದಿದ್ದ, ಆದರೆ ಬೆಳಗ್ಗೆ ಕರೆ ಮಾಡಿದವರು ನಿಮ್ಮ ಮಗ ಕಿಡ್ನ್ಯಾಪ್ ಆಗಿದ್ದಾನೆ. ಆತನನ್ನು ಬಿಡುಗಡೆ ಮಾಡಬೇಕೆಂದರೆ ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಇದರಿಂದ ಕಂಗಾಲಾದ ಮನೀಷ್ ತಂದೆ ಮನೋಹರ್, ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.
ಆರ್.ಆರ್,ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮನೀಷ್ ಮೊಬೈಲ್ ಟ್ರ್ಯಾಕ್ ಮಾಡಿದಾಗ ಸ್ವಿಚ್ಆಫ್ ಬಂದಿದೆ. ಬಳಿಕ ಬೇರೊಂದು ನಂಬರ್‌ನಿಂದ ಹಣ ಅರೆಂಜ್ ಆಯ್ತಾ ಎಂದು ಕರೆ ಬಂದಿದ್ದು, ಆ ನಂಬರ್ ಟ್ರ್ಯಾಕ್ ಮಾಡಿದಾಗ ಅದು ಹಾಸನ ಭಾಗದಲ್ಲಿರುವುದು ಪತ್ತೆಯಾಗಿದೆ.
ಈ ವೇಳೆ ಮನೀಷ್ ಇನ್ನಿಬ್ಬರು ವ್ಯಕ್ತಿಗಳ ಜೊತೆ ಒಂದು ರೂಮ್ ನಲ್ಲಿ ಇರುವುದು ಗೊತ್ತಾಗಿದೆ. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೀಷ್ ಸಾಲ ತೀರಿಸಲು ಹಣದ ಅಗತ್ಯವಿತ್ತು. ಹಾಗಾಗಿ ಹೀಗೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮನೀಷ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

