ಬೆಂಗಳೂರು: ಗೋವಾದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಜಮೀನು ಕೊಡಿಸುವುದಾಗಿ ನಂಬಿಸಿ ಕಾಂಗ್ರೆಸ್ ಮುಖಂಡ ರಕ್ಷಾ ರಾಮಯ್ಯ ಅವರ ರಿಯಲ್ ಎಸ್ಟೇಟ್ ಕಂಪನಿಗೆ 8.13 ಕೋಟಿ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಗೋವಾದ ಮಪುಸಾ ನಗರಸಭೆ ಸದಸ್ಯ ತಾರಕ್ ಮಂಗೇಶ್ ಅರೋಲ್ಕರ್ (47) ಎಂಬಾತ ರಕ್ಷಾ ರಾಅಮಯ್ಯ ಅವರಿಗೆ ಬರೋಬ್ಬರಿ 8.13 ಕೋಟಿ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಆರೋಪಿ ತಾರಕ್ ಮಂಗೇಶ್ ನನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
2023ರಲ್ಲಿ 28,825 ಚದರ ಮೀಟರ್ ಜಮೀನು ಖರೀದಿಗೆ ಒಪ್ಪಂದ ಮಾಡಿಕೊಂಡು ಹಣ ಪಡೆದಿದ್ದ ತಾರಕ್, ನೋಂದಣಿ ಮಾಡಿಕೊಡದೆ ಅದೇ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿ ವಂಚಿಸಿದ್ದ.
ಈ ಸಂಬಂಧ ರಕ್ಷಾ ರಾಅಮಯ್ಯ ಕಂಪನಿ ಪ್ರತಿನಿಧಿ ದರ್ಶನ್ ನೀಡಿದ ದೂರಿನನ್ವಯ, ಈ ಹಿಂದೆ ಬೇರೆ ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ತಾರಕ್ನನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ಸದಾಶಿವನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಯೋಗೇಶ್ಗಾಗಿ ಹುಡುಕಾಟ ನಡೆಸಿದ್ದಾರೆ.
ಸಾಲ ತೀರಿಸಲು ಕಿಡ್ನ್ಯಾಪ್ ನಾಟಕ: ತಂದೆಗೆ ಕರೆ ಮಾಡಿ 90 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ ಮಗ
ಬೆಂಗಳೂರು: ಮೈತುಂಬ ಸಾಲ ಮಾಡಿಕೊಂಡಿದ್ದ ಮಗರಾಯನೊಬ್ಬ, ಸಾಲ ತೀರಿಸುವ ಸಲುವಾಗಿ ತಾನು ಕಿಡ್ನ್ಯಾಪ್ ಆಗಿದ್ದಾಗಿ ಕಥೆ ಕಟ್ಟಿ ತಂದೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಬೆಂಗಳೂರಿನ ಆರ್.ಆರ್.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮನೀಷ್ (40) ಎಂಬಾತ ತನ್ನ ತಂದೆ ಮನೋಹರ್ ಪಟೇಲ್ (62) ಅವರಿಗೆ ಸ್ನೇಹಿತರ ಮೂಲಕ ತನ್ನದೇ ನಂಬರ್ನಿಂದ ವಾಟ್ಸಾಪ್ ಕರೆ ಮಾಡಿಸಿ, ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ ಎಂದು ಹೇಳಿ ಹೆದರಿಸಿದ್ದ. ಮಗನನ್ನು ಬಿಡಬೇಕು ಎಂದಾದರೆ 90 ಲಕ್ಷ ರೂ. ಹಣ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ.
ಹಿಂದಿನ ದಿನ ಹಣದ ವ್ಯವಹಾರಕ್ಕೆಂದು ರೈಲಿನಲ್ಲಿ ಗದಗಕ್ಕೆ ಹೋಗುವುದಾಗಿ ಹೇಳಿ ಮನೀಷ್ ಹೊರಟಿದ್ದ. ಬೆಳಗ್ಗೆ ಫೋನ್ ಮಾಡ್ತೀನಿ ಎಂದಿದ್ದ, ಆದರೆ ಬೆಳಗ್ಗೆ ಕರೆ ಮಾಡಿದವರು ನಿಮ್ಮ ಮಗ ಕಿಡ್ನ್ಯಾಪ್ ಆಗಿದ್ದಾನೆ. ಆತನನ್ನು ಬಿಡುಗಡೆ ಮಾಡಬೇಕೆಂದರೆ ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಇದರಿಂದ ಕಂಗಾಲಾದ ಮನೀಷ್ ತಂದೆ ಮನೋಹರ್, ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.
ಆರ್.ಆರ್,ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮನೀಷ್ ಮೊಬೈಲ್ ಟ್ರ್ಯಾಕ್ ಮಾಡಿದಾಗ ಸ್ವಿಚ್ಆಫ್ ಬಂದಿದೆ. ಬಳಿಕ ಬೇರೊಂದು ನಂಬರ್ನಿಂದ ಹಣ ಅರೆಂಜ್ ಆಯ್ತಾ ಎಂದು ಕರೆ ಬಂದಿದ್ದು, ಆ ನಂಬರ್ ಟ್ರ್ಯಾಕ್ ಮಾಡಿದಾಗ ಅದು ಹಾಸನ ಭಾಗದಲ್ಲಿರುವುದು ಪತ್ತೆಯಾಗಿದೆ.
ಈ ವೇಳೆ ಮನೀಷ್ ಇನ್ನಿಬ್ಬರು ವ್ಯಕ್ತಿಗಳ ಜೊತೆ ಒಂದು ರೂಮ್ ನಲ್ಲಿ ಇರುವುದು ಗೊತ್ತಾಗಿದೆ. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೀಷ್ ಸಾಲ ತೀರಿಸಲು ಹಣದ ಅಗತ್ಯವಿತ್ತು. ಹಾಗಾಗಿ ಹೀಗೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮನೀಷ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

