ಬೆಂಗಳೂರು: ರಾಜ್ಯದಲ್ಲಿ ಒಂದರಿಂದ ಹತ್ತನೇ ತರಗತಿ ಓದುತ್ತಿರುವ ಎಲ್ಲಾ ಶಾಲಾ ವಿದ್ಯಾರ್ಥಿಗಳ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಭ ಕೋರಲಿದ್ದಾರೆ. ಶಾಲಾ ನೋಂದಣಿಯ ವೇಳೆ ನೀಡಿದ ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮೂಲಕ ಶುಭಾಶಯ ಸಂದೇಶ ಬರಲಿದೆ.
ಒಂದರಿಂದ ಹತ್ತನೇ ತರಗತಿವರೆಗಿನ 98 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಅವರ ಹುಟ್ಟು ಹಬ್ಬದ ದಿನದಂದು ಶುಭಾಶಯ ಸಂದೇಶ ಕಳುಹಿಸಲಾಗುವುದು. ಶಾಲಾ ನೋಂದಣಿಯ ವೇಳೆ ಮಕ್ಕಳು ನೀಡಿರುವ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಶಿಕ್ಷಣ ಇಲಾಖೆ ಮೂಲಕ ಸಿಎಂ ಫೋಟೋ ಸಹಿತ ಹುಟ್ಟುಹಬ್ಬದ ಶುಭಾಶಯ ಬರಲಿದೆ.
ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ(ಇಡಿಸಿಎಸ್) ಮೂಲಕ ಶಿಕ್ಷಣ ಇಲಾಖೆ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಈ ಪ್ರಯೋಗ ನಡೆಸಿದ್ದು, ಇದು ಯಶಸ್ವಿಯಾಗಿದ್ದರಿಂದ ಇಡೀ ವರ್ಷ ಈ ಕಾರ್ಯಕ್ರಮದ ಅಂದಾಜು ವೆಚ್ಚದೊಂದಿಗೆ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಲಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಿಎಂ ಡಿ.ಕೆ. ಶಿವಕುಮಾರ್ ಅವರಿಂದ ವಿಶೇಷ ಸಂದೇಶದೊಂದಿಗೆ ಶುಭಾಶಯ ಸ್ವೀಕರಿಸಲಿದ್ದಾರೆ.

