HomeInternationalBIG UPDATE : ನೇಪಾಳದಲ್ಲಿ ಭೀಕರ ಪ್ರವಾಹ: 950 ಜನ ಸಾವು, 4,500ಕ್ಕೂ ಅಧಿಕ ಮಂದಿ...

BIG UPDATE : ನೇಪಾಳದಲ್ಲಿ ಭೀಕರ ಪ್ರವಾಹ: 950 ಜನ ಸಾವು, 4,500ಕ್ಕೂ ಅಧಿಕ ಮಂದಿ ನಾಪತ್ತೆ

ನವದೆಹಲಿ/ಕಠ್ಮಂಡು: ನೇಪಾಳ ಮತ್ತು ಟಿಬೆಟ್‌ನಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಿಂದ ಸಾವಿನ ಸಂಖ್ಯೆ 950ಕ್ಕೂ ಹೆಚ್ಚಾಗಿದೆ. ಸುಮಾರು 4,500 ಮಂದಿ ನಾಪತ್ತೆಯಾಗಿದ್ದಾರೆ. ದುರಂತ ಎರಡನೇ ವಾರಕ್ಕೆ ಕಾಲಿಟ್ಟಿದ್ದರೂ ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ರಕ್ಷಣಾ ಸಿಬ್ಬಂದಿ ಕೆಸರು, ಅವಶೇಷಗಳು ಹಾಗೂ ದುರ್ಗಮ ಭೂಪ್ರದೇಶದ ನಡುವೆ ಸಿಲುಕಿರುವವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಚೀನಾ-ನೇಪಾಳ ಗಡಿಯ ಸಮೀಪ ಹಿಮನದಿ ಕುಸಿತದಿಂದ ಈ ಪ್ರವಾಹ ಸಂಭವಿಸಿದೆ ಎಂದು ವರದಿಯಾಗಿದೆ. ಭಾರಿ ಪ್ರಮಾಣದ ನೀರು, ಕಲ್ಲುಗಳು ಹಾಗೂ ಅವಶೇಷಗಳು ಕಳೆದ ಬುಧವಾರ ಗ್ರಾಮಗಳು ಮತ್ತು ಪಟ್ಟಣಗಳಿಗೆ ನುಗ್ಗಿದ್ದು, ವ್ಯಾಪಕ ಹಾನಿ ಉಂಟುಮಾಡಿವೆ. ಭಾರತದಲ್ಲಿ ಪ್ರವಾಹದ ಕೆಳಭಾಗದ ನದಿಗಳಿಂದ ಕನಿಷ್ಠ 17 ಮೃತದೇಹಗಳನ್ನು ಕೂಡ ಹೊರತೆಗೆಯಲಾಗಿದೆ.

ಸುರಂಗಗಳಲ್ಲಿ ಸಿಲುಕಿರುವ 100ಕ್ಕೂ ಹೆಚ್ಚು ಕಾರ್ಮಿಕರು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೇಪಾಳದ ರಸು್ವಾ ಜಿಲ್ಲೆಯಲ್ಲಿ ಹಲವು ಸುರಂಗಗಳೊಳಗೆ ಸುಮಾರು 100 ಜಲವಿದ್ಯುತ್ ಕಾರ್ಮಿಕರು ಸಿಲುಕಿರುವ ಶಂಕೆ ಇದೆ. ಅವರನ್ನು ರಕ್ಷಿಸಲು ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

ಈವರೆಗೆ ಎರಡು ಸುರಂಗಗಳಿಂದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಆದರೆ ಕೆಸರು ಮತ್ತು ಅವಶೇಷಗಳಿಂದ ಸುರಂಗಗಳಿಗೆ ತೆರಳುವ ಮಾರ್ಗಗಳು ಬಹುತೇಕ ಬಂದ್ ಆಗಿವೆ. ದಪ್ಪ ಕೆಸರನ್ನು ತೆರವುಗೊಳಿಸಿ ಕಾರ್ಮಿಕರನ್ನು ತಲುಪಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇನ್ನೂ ಬದುಕುಳಿದವರನ್ನು ಪತ್ತೆಹಚ್ಚುವ ವಿಶ್ವಾಸವಿದೆ ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಭಾರತೀಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೇಪಾಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಸುಮಾರು 20,600 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಂದ ಈಗಾಗಲೇ 3,100ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ಈ ದುರಂತದಿಂದ ಹಲವು ಸಮುದಾಯಗಳು ಸಂಪೂರ್ಣವಾಗಿ ನಾಶವಾಗಿವೆ. ರಸ್ತೆಗಳು ಕೊಚ್ಚಿಹೋಗಿದ್ದು, ಸೇತುವೆಗಳು ಕುಸಿದಿವೆ ಹಾಗೂ ವಿದ್ಯುತ್ ಸ್ಥಾವರಗಳಿಗೂ ಭಾರೀ ಹಾನಿಯಾಗಿದೆ. ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರು ಪರಿಸ್ಥಿತಿಯನ್ನು “ಊಹಿಸಲೂ ಅಸಾಧ್ಯವಾದ ಮತ್ತು ಹೃದಯವಿದ್ರಾವಕ” ದುರಂತ ಎಂದು ಹೇಳಿದ್ದಾರೆ.

ನಾಪತ್ತೆಯಾದವರಿಗಾಗಿ ಕುಟುಂಬಸ್ಥರ ಹುಡುಕಾಟ

ಮೃತದೇಹಗಳನ್ನು ಇರಿಸಲು ಶವಾಗಾರಗಳಲ್ಲೂ ಸ್ಥಳಾವಕಾಶದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ, ನೇಪಾಳದಲ್ಲಿ ಗುರುತು ಪತ್ತೆಯಾಗದ ಮೃತದೇಹಗಳನ್ನು ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ ಬಳಿಕ ಅಂತ್ಯಸಂಸ್ಕಾರ ಮಾಡಲು ಆರಂಭಿಸಲಾಗಿದೆ. ನಂತರ ಡಿಎನ್‌ಎ ಪರೀಕ್ಷೆಯ ಮೂಲಕ ಮೃತರ ಗುರುತು ಪತ್ತೆಹಚ್ಚಿ, ಕುಟುಂಬಗಳಿಗೆ ಮಾಹಿತಿ ನೀಡುವ ಪ್ರಯತ್ನ ನಡೆಯಲಿದೆ.

ನಾಪತ್ತೆಯಾದ ತಮ್ಮವರಿಗಾಗಿ ಕುಟುಂಬಸ್ಥರು ಸಮುದಾಯ ಕೇಂದ್ರಗಳಿಗೆ ತೆರಳಿ ಪತ್ತೆಯಾದ ಮೃತದೇಹಗಳ ಚಿತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಮೃತದೇಹಗಳನ್ನು ಸಂಗ್ರಹಿಸಲು 1,000ಕ್ಕೂ ಹೆಚ್ಚು ಫ್ರೀಜರ್ ಘಟಕಗಳ ಅಗತ್ಯವಿದೆ ಎಂದು ನೇಪಾಳ ಅಂತರರಾಷ್ಟ್ರೀಯ ನೆರವನ್ನೂ ಕೋರಿದೆ.

ನೇಪಾಳದಲ್ಲಿ ನಾಪತ್ತೆಯಾದವರ ಪಟ್ಟಿಯಲ್ಲಿ 592 ವಿದೇಶಿಯರೂ ಇದ್ದಾರೆ. ಇವರಲ್ಲಿ ಟಿಬೆಟ್‌ನ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಯಾತ್ರಿಕರು ಮತ್ತು ಪ್ರವಾಸಿಗರೂ ಸೇರಿದ್ದಾರೆ.

ಟಿಬೆಟ್‌ನಲ್ಲೂ ಭಾರೀ ಹಾನಿ

ಟಿಬೆಟ್‌ನಲ್ಲಿ 16 ಮಂದಿ ಮೃತಪಟ್ಟಿದ್ದು, 546 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚೀನಾ ಮಾಹಿತಿ ನೀಡಿದೆ. 2,000ಕ್ಕೂ ಹೆಚ್ಚು ಸಿಬ್ಬಂದಿ ಅಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ದುರಂತದ ಕೇಂದ್ರ ಪ್ರದೇಶವನ್ನು ತಲುಪುವುದು ಇನ್ನೂ ಕಷ್ಟಕರವಾಗಿದೆ.

ಚೀನಾದ ಸಾವಿನ ಮತ್ತು ನಾಪತ್ತೆಯಾದವರ ಅಂಕಿಅಂಶಗಳ ಕುರಿತು ಕೆಲವು ಟಿಬೆಟಿಯನ್ ಹಕ್ಕುಗಳ ಸಂಘಟನೆಗಳು ಪ್ರಶ್ನೆ ಎತ್ತಿದ್ದು, ಹೆಚ್ಚಿನ ಮಾಹಿತಿ ಬಿಡುಗಡೆ ಮಾಡುವಂತೆ ಒತ್ತಾಯಿಸಿವೆ. ಆದರೆ ಸಾವಿನ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ ಎಂಬ ಆರೋಪಗಳನ್ನು ಬೀಜಿಂಗ್ ತಳ್ಳಿಹಾಕಿದ್ದು, ಮಾಹಿತಿ ಬಿಡುಗಡೆ “ಮುಕ್ತ, ಪಾರದರ್ಶಕ ಮತ್ತು ಸಮಯೋಚಿತ”ವಾಗಿದೆ ಎಂದು ಹೇಳಿದೆ.

ಹವಾಮಾನ ಬದಲಾವಣೆಯ ಆತಂಕ

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಈ ದುರಂತಕ್ಕೆ ಹಿಮನದಿ ಕುಸಿತವೇ ಕಾರಣವಾಗಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಹಿಮಾಲಯದಲ್ಲಿ ಹಿಮನದಿಗಳು ವೇಗವಾಗಿ ಕರಗುತ್ತಿದ್ದು, ಇಂತಹ ಹಿಮನದಿ ಸಂಬಂಧಿತ ದುರಂತಗಳ ಅಪಾಯ ಹೆಚ್ಚುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

“ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮಗಳಿಂದ ನೇಪಾಳದ ಜನರು ಪ್ರಮುಖವಾಗಿ ಬಾಧಿತರಾಗಿದ್ದಾರೆ” ಎಂದು ವಿದೇಶಾಂಗ ಸಚಿವ ಶಿಶಿರ್ ಖನಾಲ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆಯೂ ಪರಿಸ್ಥಿತಿಯನ್ನು “ಮುಂದುವರಿಯುತ್ತಿರುವ ದುರಂತ” ಎಂದು ಬಣ್ಣಿಸಿದ್ದು, ಹತ್ತಾರು ಸಾವಿರ ಜನರು ಇದರ ಪರಿಣಾಮಕ್ಕೆ ಒಳಗಾಗಿದ್ದಾರೆ ಮತ್ತು ಮಾನವೀಯ ನೆರವಿನ ಅಗತ್ಯತೆ ಅಪಾರವಾಗಿದೆ ಎಂದು ಎಚ್ಚರಿಸಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular