ತಿಂಗಳು ಬದಲಾದಂತೆ ದೇಶದಲ್ಲಿ ಹಲವು ಹೊಸ ನಿಯಮಗಳು, ನಿಬಂಧನೆಗಳು ಮತ್ತು ಶುಲ್ಕಗಳು ಜಾರಿಗೆ ಬರುತ್ತವೆ. ಪ್ರತೀ ತಿಂಗಳ 1ನೇ ತಾರೀಖಿನಿಂದ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಹಲವು ಬದಲಾವಣೆಗಳು ಜಾರಿಗೆ ಬರುತ್ತಿರುವುದು ಸಾಮಾನ್ಯ. ಅದರಂತೆ ಸೆಪ್ಟೆಂಬರ್ 1ರಿಂದಲೂ ಕೆಲವು ಪ್ರಮುಖ ನಿಯಮಗಳು ಬದಲಾಗಲಿವೆ.
LPG, ವಿದೇಶ ಪ್ರಯಾಣ, ಬಲ್ಕ್ ಫಿಕ್ಸ್‌ಡ್ ಡೆಪಾಸಿಟ್‌ಗಳು, ಗ್ಯಾಸ್ ದರಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳಾಗಲಿವೆ.
LPG ಇ-ಕೆವೈಸಿಗೆ ಆ.31 ಕೊನೆಯ ಗಡುವು
LPG ಇ-ಕೆವೈಸಿ ಪೂರ್ಣಗೊಳಿಸಲು ಆಗಸ್ಟ್ 31 ಕೊನೆಯ ದಿನವಾಗಿತ್ತು.. ಇನ್ನೂ ಇ-ಕೆವೈಸಿ ಮಾಡಿಸದ ಗ್ರಾಹಕರು ತಕ್ಷಣವೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ತೈಲ ಮಾರುಕಟ್ಟೆ ಕಂಪನಿಗಳು ಸೂಚಿಸಿವೆ.ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಗ್ಯಾಸ್ ಸಬ್ಸಿಡಿ ಸ್ಥಗಿತಗೊಳ್ಳುವುದರ ಜೊತೆಗೆ LPG ಪೂರೈಕೆಯಲ್ಲೂ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.
ವಿದೇಶ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್‌ನಲ್ಲಿ ಸ್ಟಾಂಪ್ ಅಗತ್ಯವಿಲ್ಲ
ಭಾರತದಿಂದ ವಿದೇಶಕ್ಕೆ ತೆರಳುವ ಪ್ರಯಾಣಿಕರಿಗೆ ಸೆಪ್ಟೆಂಬರ್ 1ರಿಂದ ಇಮ್ಮಿಗ್ರೇಷನ್ ಕೌಂಟರ್‌ನಲ್ಲಿ ಬೋರ್ಡಿಂಗ್ ಪಾಸ್ ಮೇಲೆ ಸ್ಟಾಂಪ್ ಹಾಕಿಸಿಕೊಳ್ಳುವ ಅಗತ್ಯವಿರುವುದಿಲ್ಲ.
ಪ್ರಯಾಣಿಕರು ಮೊಬೈಲ್‌ನಲ್ಲಿರುವ ಎಲೆಕ್ಟ್ರಾನಿಕ್ ಬೋರ್ಡಿಂಗ್ ಪಾಸ್ ಅಥವಾ ಅದರ ಪ್ರಿಂಟ್ ಕಾಪಿಯನ್ನು ತೋರಿಸಿದರೆ ಸಾಕಾಗುತ್ತದೆ. ಅಂತರರಾಷ್ಟ್ರೀಯ ಪ್ರಯಾಣಿಕರ ಇಮ್ಮಿಗ್ರೇಷನ್ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಬಲ್ಕ್ ಫಿಕ್ಸ್‌ಡ್ ಡೆಪಾಸಿಟ್‌ಗಳ ನಿಯಮದಲ್ಲಿ ಬದಲಾವಣೆ
ಬಲ್ಕ್ ಫಿಕ್ಸ್‌ಡ್ ಡೆಪಾಸಿಟ್‌ಗಳಿಗೆ ಸಂಬಂಧಿಸಿದ ಹೊಸ ನಿಯಮಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ. ಇದರ ಪ್ರಕಾರ ಬ್ಯಾಂಕ್‌ಗಳು ಪ್ರತಿದಿನ ಬೆಳಗ್ಗೆ 10.10ರೊಳಗೆ ತಮ್ಮ ವೆಬ್‌ಸೈಟ್‌ನಲ್ಲಿ ಬಲ್ಕ್ ಡೆಪಾಸಿಟ್‌ಗಳ ಬಡ್ಡಿದರಗಳನ್ನು ಪ್ರಕಟಿಸಬೇಕು.
₹3 ಕೋಟಿಗಿಂತ ಹೆಚ್ಚಿನ ಬಲ್ಕ್ ಡೆಪಾಸಿಟ್‌ಗಳಿಗೆ ಅನ್ವಯಿಸುವ ಬಡ್ಡಿದರಗಳನ್ನು ಬ್ಯಾಂಕ್‌ಗಳು ಪ್ರಕಟಿಸಬೇಕಾಗುತ್ತದೆ. ಒಂದೇ ದಿನ ಸ್ವೀಕರಿಸಲಾದ ಠೇವಣಿಗಳಿಗೆ ಬ್ಯಾಂಕ್‌ನ ಎಲ್ಲ ಶಾಖೆಗಳಲ್ಲೂ ಒಂದೇ ಬಡ್ಡಿದರ ಅನ್ವಯವಾಗಬೇಕು.
LPG ಮತ್ತು ಇಂಧನ ದರಗಳಲ್ಲಿ ಪರಿಷ್ಕರಣೆ
ಸೆಪ್ಟೆಂಬರ್ 1ರಿಂದ LPG ದರಗಳಲ್ಲೂ ಬದಲಾವಣೆಯಾಗುವ ಸಾಧ್ಯತೆಯಿದೆ. ಗ್ಯಾಸ್ ಕಂಪನಿಗಳು ಸಾಮಾನ್ಯವಾಗಿ ಪ್ರತೀ ತಿಂಗಳ 1ನೇ ತಾರೀಖಿನಂದು ಹೊಸ LPG ದರಗಳನ್ನು ಪ್ರಕಟಿಸುತ್ತವೆ.
ಇದರ ಜೊತೆಗೆ ಏವಿಯೇಷನ್ ಟರ್ಬೈನ್ ಫ್ಯೂಯೆಲ್ (ATF) ದರಗಳಲ್ಲೂ ಪರಿಷ್ಕರಣೆ ನಡೆಯಲಿದೆ.
ಬ್ಯಾಂಕಿಂಗ್ ಮತ್ತು ATM ಶುಲ್ಕದಲ್ಲೂ ಬದಲಾವಣೆ
ಸೆಪ್ಟೆಂಬರ್ 1ರಿಂದ ಬ್ಯಾಂಕಿಂಗ್ ಸೇವೆಗಳು ಮತ್ತು ATM ಶುಲ್ಕಗಳಿಗೆ ಸಂಬಂಧಿಸಿದಂತೆ ಕೂಡ ಕೆಲವು ಬದಲಾವಣೆಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ಬ್ಯಾಂಕ್ ಗ್ರಾಹಕರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.
ಹೀಗಾಗಿ ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿರುವ ಈ ನಿಯಮಗಳು ಮತ್ತು ಶುಲ್ಕ ಬದಲಾವಣೆಗಳ ಬಗ್ಗೆ ಗ್ರಾಹಕರು ಮುಂಚಿತವಾಗಿಯೇ ಮಾಹಿತಿ ತಿಳಿದುಕೊಳ್ಳುವುದು ಅಗತ್ಯ.

