HomeKarnatakaಈಗಾಗಲೇ ನಿಮ್ಮದೇ ಅಲ್ಲೋಲ ಕಲ್ಲೋಲವಾಗಿದೆ: ಮೊದಲು ಅದನ್ನು ನೋಡಿಕೊಳ್ಳಿ: ಹೆಚ್.ಡಿ.ಕುಮಾರಸ್ವಾಮಿಗೆ ಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು

ಈಗಾಗಲೇ ನಿಮ್ಮದೇ ಅಲ್ಲೋಲ ಕಲ್ಲೋಲವಾಗಿದೆ: ಮೊದಲು ಅದನ್ನು ನೋಡಿಕೊಳ್ಳಿ: ಹೆಚ್.ಡಿ.ಕುಮಾರಸ್ವಾಮಿಗೆ ಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು

ಬೆಂಗಳೂರು: ಬಿಜೆಪಿಯಲ್ಲಿ ಈಗ ಕಾಂಪಿಟೇಷನ್ ನಡೆಯುತ್ತಿದೆ. ಅಶೋಕವರನ್ನು ಕೆಳಗಿಳಿಸಬೇಕೋ ಅಥವಾ ವಿಜಯೇಂದ್ರ ಅವರನ್ನು ಕೆಳಗಿಳಸಬೇಕೋ ಎಂಬ ಬಗ್ಗೆ ಸ್ಪರ್ಧೆ ನಡೆಯುತ್ತಿದೆ. ಚುನಾವಣೆ ಹತ್ತಿರ ಬರಲಿ ಅಶೋಕ್ ಹಾಗೂ ವಿಜಯೇಂದ್ರ ಅವರಿಗೆ ಯಾವ ಅಧಿಕಾರವೂ ಇರೋದಿಲ್ಲ. ಬೇರೆಯವರು ಪ್ಯಾರಾಚೂಟ್ ಮೂಲಕ ಇಳಿಯುತ್ತಾರೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಅಶೋಕ್, ವಿಜಯೇಂದ್ರ ಅವರ ಕತೆ ಏನಿದ್ದರೂ, ಬರೀ ಬುಟ್ಟಿ ಬೇವಿನ ಸೊಪ್ಪು, ನಂದೇ ಬೆಳಗು ಪೂಜಾರಿ ಅನ್ನೋ ತರಹ. ಕುಮಾರಸ್ವಾಮಿ ಇವರಿಬ್ಬರನ್ನು ಇಳಿಸಿ‌ ನನಗೇನಾದರೂ ಸಿಗಬಹುದಾ ಅಂತಾ ನೋಡುತ್ತಿದ್ದಾರೆ. ಹೀಗಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಬಾಂಬ್ ಹಾಕುತ್ತೇನೆ ಎನ್ನುತ್ತಿದ್ದಾರೆ ಎಂದು ಟಾಂಗ್ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ದೊಡ್ಡ ಮಂತ್ರಿ ಸ್ಥಾನ ಸಿಕ್ಕಿದೆ. ಅದರ ಮೂಲಕ ಕರ್ನಾಟಕದ 50 ಸಾವಿರ ಜನರಿಗೆ ಉದ್ಯೋಗ ಸಿಗುವಂತೆ ಮಾಡಲಿ. ಅವರಿಗೆ ಎಲ್ಲಿ ಬೇಕೋ ಅಲ್ಲಿ, ಮಂಡ್ಯದಲ್ಲೇ ಬೇಕಾದರೂ ಭೂಸ್ವಾಧೀನ ಮಾಡಿ ಕೊಡೋಣ. ಆದರೆ ಅವರು ನನ್ನನ್ನು ಅಧಿಕಾರದಿಂದ ಇಳಿಸಿ ಬಿಡ್ತೇನೆ, ದೆಹಲಿಯಿಂದ ಬಾಂಬ್ ಹಾಕಿ ಬಿಡ್ತೇನೆ, ಅಲ್ಲೋಲ‌ ಕಲ್ಲೋಲ ಮಾಡಿ ಬಿಡ್ತೇನೆ ಅಂತ ಮಾತಾಡುತ್ತಿದ್ದಾರೆ ಎಂದು ಹೇಳಿದರು.

ನಿಮ್ಮದೇ ಅಲ್ಲೋಲ ಕಲ್ಲೋಲವಾಗಿದೆ. ಮೊದಲು ಅದನ್ನು ನೋಡಿಕೊಳ್ಳಿ. ಅದೇನೋ ಅಲ್ಲೋಲ ಕಲ್ಲೋಲ ಆಗಿದೆಯಲ್ಲ. ಅದನ್ನು ನಾನು ಬಿಡಿಸಿ ಹೇಳಬೇಕೆ? ದಿನವೂ ನಾವು ಟಿವಿಯಲ್ಲಿ ನೋಡುತ್ತಿದ್ದೇವಲ್ಲ ಎಂದಾಗ ಸಭಿಕರೊಬ್ಬರು “ಪೆನ್ ಡ್ರೈವ್” ಎಂದು ಕೂಗಿದರು. ಆಗ ಸಿಎಂ ಅವರು, “ನಮಗೆ ಪೆನ್ ಡ್ರೈವ್ ವಿಚಾರ ಬೇಡ, ಅವರುಗಳು ಏನು ಬೇಕಾದರೂ ಮಾಡಿಕೊಳ್ಳಲಿ. ಸೆಂಟ್ರಲ್ ಜೈಲ್ ವಿಚಾರವೆಲ್ಲ ಅವರವರದ್ದು. ಅದೆಲ್ಲವೂ ಅವರ ಸಿದ್ದಾಂತ. ಅವರಿಂದ ಯಾರ್ಯಾರ ಕುಟುಂಬ ಏನಾಯಿತು ಎಂದು ಈಗ ಮಾತನಾಡುವುದು ಬೇಡ” ಎಂದರು.

ನಮ್ಮನ್ನು ಏನು ಬೇಕಾದರೂ ಮಾಡಲಿ. ನಮ್ಮನ್ನು ಬೇಕಾದರೆ ಸೀಳಿ ಇಡಿ, ಸಿಬಿಐಗೆ ತೆಗೆದುಕೊಂಡು ಹೋಗಲಿ, ಯಾವ ತನಿಖೆ ಬೇಕಾದರೂ ಮಾಡಲಿ. ಆದರೆ ಅವರ ವಿರುದ್ಧ ತನಿಖೆ ಮಾಡಿದಾಗ ನ್ಯಾಯಾಲಯಕ್ಕೆ ಹೋಗಿ ಏಕೆ ತಡೆಯಾಜ್ಞೆ ತರಲಾಗುತ್ತಿದೆ. ನೀವೆಲ್ಲವೂ ಟೀಮ್ ಅಲ್ಲವೇ? ಈ ಸ್ಥಾನದಲ್ಲಿದ್ದುಕೊಂಡು ದ್ವೇಷ ಬೇಡ ಎಂದು ಆ ವಿಚಾರಗಳಿಗೆ ನಾನು ಹೋಗಿಲ್ಲ.‌ ಯಾರಿಗೂ ತೊಂದರೆ ಆಗಬಾರದು ಎಂಬುದು ನನ್ನ ಆಶಯ. ಈ ಅಧಿಕಾರ ಸಕಾರಾತ್ಮಕವಾಗಿ ಉಪಯೋಗವಾಗಬೇಕು. ಈ ಅಧಿಕಾರ ಇರುವುದು ದುರುಪಯೋಗ ಮಾಡಲು ಅಲ್ಲ. ಹತ್ತು ಜನಕ್ಕೆ ಒಳ್ಳೆಯದನ್ನು ಮಾಡಲು ಎಂಬುದು ನನ್ನ ಬದ್ಧತೆ ಎಂದರು.

10 ದಿನ ಸದನ ನಡೆಸಲೂ ಬಿಡಲಿಲ್ಲ. ಆನಂತರವೂ ಪಾದಯಾತ್ರೆ ಮಾಡಿದರು. ಈಗ ಕರೆದಿರುವ ಅಧಿವೇಶನದಲ್ಲಿ ಬೇರೆ ವಿಚಾರ ಮಾತನಾಡುವಂತಿಲ್ಲ.‌ ಕೇವಲ ರೈತರ ವಿಚಾರ ಮಾತ್ರ. ಕಸ್ತೂರಿ ರಂಗನ್ ವರದಿ ಜಾರಿಗೆ ತಂದವರು ಯಾರು? ಇದರ ಬಗ್ಗೆ ಚರ್ಚೆ ಮಾಡಲಿ, ಬಿಡಲಿ. ಅದು ಅವರಿಗೆ ಬಿಟ್ಟಿದ್ದು. ಆನಂತರ ಅವರು ಗದೆಯಾದರೂ ಬೀಸಲಿ, ಬಾಣವನ್ನಾದರೂ ಬಿಡಲಿ. ಇದನ್ನು ಅನುಭವಿಸಲು ನಮ್ಮ ಪಕ್ಷ, ನಾವು ಹಾಗೂ ಕಾರ್ಯಕರ್ತರು ಸಿದ್ಧರಿದ್ದೇವೆ ಎಂದರು.‌

ರಾಜಕೀಯ ಸಾಧ್ಯತೆಗಳ ಕಲೆ.‌ ಜನರ ನಡುವೆ ಇದ್ದರೆ ಜನ ಜಾತಿ ಕೇಳಲ್ಲ‌. ನಾಯಕ ಕ್ರಿಯಾಶೀಲನಾಗಿದ್ದರೆ ಜನ ಗೆಲ್ಲಿಸುತ್ತಾರೆ. ಕೆಲವರು ಭಾವನೆಗಳ ಮೇಲೆ ಜಾತಿ ಮಾಡುತ್ತಾರೆ. ನನಗೆ ಜಾತಿಗಿಂತ ನೀತಿ, ಸಿದ್ಧಾಂತದ ಮೇಲೆ ನಂಬಿಕೆ ಎಂದು ಹೇಳಿದರು.

ನನಗೆ ಶ್ರಮ, ಸಿದ್ಧಾಂತ, ಕಾಯಕದ ಮೇಲೆ ನಂಬಿಕೆ. ಶ್ರಮ ಇದ್ದ ಕಡೆ ಫಲವಿದೆ. ಒಂಟಿಯಾಗಿರುವ ನಾಯಕ ಎಂದಿಗೂ ಗೆಲುವು ಕಾಣುವುದಿಲ್ಲ. ಜನ ಜಾತಿ ನೋಡುವ ಹಾಗಿದ್ದರೆ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲು ಹೇಗೆ ಸಾಧ್ಯ? ಸಿಂಧ್ಯಾ ಅವರು ನನ್ನ ಕ್ಷೇತ್ರದಲ್ಲಿ 6 ಬಾರಿ ಶಾಸಕರಾಗಿದ್ದರು. ಅಲ್ಲಿ ಮರಾಠಿ ಮತದಾರರ ಸಂಖ್ಯೆ 3 ಸಾವಿರರವೂ ದಾಟಿಲ್ಲ‌. ರಾಮನಗರದಲ್ಲಿ ನಿಖಿಲ್ ಎದುರು ಇಕ್ಬಾಲ್ ಹುಸೇನ್ ಗೆಲ್ಲಲು ಹೇಗೆ ಸಾಧ್ಯ? ಎಂದು ಹೇಳಿದರು.

ಮಾಜಿ ಮೇಯರ್ ನಾಗರಾಜ್ ಅವರಿಗೆ, ಕೆ ಎಂ ನಾಗರಾಜ್ ಅವರಿಗೆ ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಟಿಕೆಟ್ ನೀಡಲು ತೀರ್ಮಾನಿಸಲಾಯಿತು. ಆಗ ನಾವು ನರೇಂದ್ರ ಬಾಬು ಹಾಗೂ ಚಂದ್ರಶೇಖರ್ ಅವರಿಗೆ ನೀಡೋಣ ಎಂದು ಎಸ್ ಎಂ ಕೃಷ್ಣ ಅವರಿಗೆ ಹೇಳಿದೆವು. ಆಗ ಅನೇಕರು ಎರಡೂ ಕ್ಷೇತ್ರಗಳು ಒಕ್ಕಲಿಗರ ಪ್ರಾಬಲ್ಯವಿದೆ. ಅಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗದವರು ಗೆಲ್ಲಲು ಸಾಧ್ಯವೇ ಎಂದು ಕೇಳಿದರು. ಆದರೆ ಇವರಿಬ್ಬರೂ ಗೆದ್ದರು ಎಂದರು.

ಗ್ಯಾರಂಟಿ ಯೋಜನೆಗಳನ್ನು ಟ್ರಂಪ್ ನಕಲು ಮಾಡುತ್ತಿದ್ದಾರೆ

ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿದವು. ಆದರೆ ಇಂದು ನಾವು ಗ್ಯಾರಂಟಿಗಳಿಂದಲೇ ದೇಶಕ್ಕೆ ಮಾದರಿಯಾಗಿದ್ದೇವೆ. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಹೀಗೆ ಎಲ್ಲಾ ಕಡೆ ಕರ್ನಾಟಕ ಮಾದರಿ ನಕಲು ಮಾಡಿದರು ಈಗ ಅಮೇರಿಕಾದ ಟ್ರಂಪ್ ಕೂಡ ನಕಲು ಮಾಡುತ್ತಿದ್ದಾರೆ. ನನಗೆ ಮತ ಹಾಕಿ, ಇಂತಿಷ್ಟು ಡಾಲರ್ ಹಣ ನೀಡುತ್ತೇನೆ ಎಂದು ಹೇಳುತ್ತಿದ್ದಾರೆ. ನಮ್ಮ ಆಲೋಚನೆ ಇಡೀ ವಿಶ್ವಕ್ಕೆ ಪರಿಚಯವಾಗುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳನ್ನು ಎಲ್ಲಾ ಪಕ್ಷ, ಜಾತಿಗಳಿಗೂ ನೀಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಬಂದ ಮತಗಳು 1.34 ಲಕ್ಷ ಆದರೆ 4.44 ಕೋಟಿ ಜನರಿಗೆ ಅನ್ನಭಾಗ್ಯ ನೀಡುತ್ತಿದ್ದೇವೆ. ಅದಕ್ಕೆ ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ, ಇತಿಹಾಸ ಎಂದರು.

ಅಸ್ಸಾಂ ರಾಜ್ಯದಲ್ಲಿ ಕೆಲವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದಾರೆ. ಎಸ್ ಸಿಪಿ, ಟಿಎಸ್ ಪಿ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ವಿದ್ಯಾರ್ಥಿಗಳಿಗೆ ಬಸ್ ಪಾಸ್ ಉಚಿತವಾಗಿ ನೀಡಲಾಗುತ್ತಿದೆ. ಜನರ ಮನೆ ಬಾಗಿಲಿಗೆ ಸರ್ಕಾರ ತಲುಪಿಸಿದ್ದೇವೆ. ಪ್ರಜಾಸೇವೆ ಮಾಡುತ್ತಿದ್ದೇವೆ. ಇದನ್ನು ಶಾಸಕರು ಹೇಗೆ ಬಳಸಿಕೊಳ್ಳುತ್ತಾರೋ ತಿಳಿದಿಲ್ಲ. ನಾನಂತೂ ಆದಷ್ಟು ಯಶಸ್ವಿಗೊಳಿಸುವೆ ಎಂದರು.

ಭಾರತ್ ಜೋಡೋ ಮೂಲಕ ದೇಶದ ಐಕ್ಯತೆ, ಸಮಗ್ರತೆಯನ್ನು ಕಾಪಾಡಲು ಮಾಡಲಾಯಿತು. ಈ ಪಾದಯಾತ್ರೆ ನಡೆದ ಸ್ಥಳಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿತ್ತು. ಇದೇ ಅಲೆ 2028 ರಲ್ಲಿಯೂ ಇರಲಿದೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು.

ಈ ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಿದ್ದು ಕಾಂಗ್ರೆಸ್ ಪಕ್ಷ. ಬಡವರ ಪರ ಆಲೋಚನೆ ಮಾಡುವುದು, ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವುದು, ತಂದಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ಅದಕ್ಕೆ ನಾವು ಕಾರ್ಯಕರ್ತರಿಗೆ ಅಧಿಕಾರ ನೀಡಲು ಮುಂದಾಗಿದ್ದೇವೆ ಎಂದರು.

ಪ್ರತಿ ಪಂಚಾಯತಿಯಲ್ಲೂ 6 ಜನರಿಗೆ ಗ್ಯಾರಂಟಿ ಸಮಿತಿಯಲ್ಲಿ ಇರಲು ಅವಕಾಶ ನೀಡಲಾಗಿದೆ. ಇದರಿಂದ 70 ಸಾವಿರ ಜನರಿಗೆ ಅಧಿಕಾರ ಸಿಗಲಿದೆ. ಇದರಿಂದ ನೀವುಗಳು ವಿಧಾನಸೌಧಕ್ಕೆ ಬರುವ ಅಧಿಕಾರ, ಜನರ ಸೇವೆ ಮಾಡಲು ಅವಕಾಶ ಸಿಗಲಿದೆ ಎಂದರು.

ಯುವಕರು ಕೌಶಲ್ಯದ ಮೇಲೆ ಹೆಚ್ಚು ಆಧ್ಯತೆ ನೀಡಬೇಕು. ಇದರಿಂದ ಹೆಚ್ಚು ಅವಕಾಶಗಳು ಸೃಷ್ಟಿಯಾಗಲಿದೆ. ಎಲ್ಲರ ಕೆಲಸಗಳನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಅದಕ್ಕೆ ಅದರದೇ ಆದ ಕೌಶಲ್ಯ ಮುಖ್ಯ. ಉದ್ಯೋಗ ಮಾಡುವ ಅವಕಾಶವಿದೆ ಎಂದರು‌

“ಎಲ್ಲಾ ಜಾತಿಗಳು ಒಂದೇ ಎಂದು ನಾವು ಭಾವಿಸಿದ್ದೇವೆ. ಶಾಲೆಗಳಲ್ಲಿ ಯಾರೂ ಜಾತಿ ಕೇಳುವುದಿಲ್ಲ. ನಮ್ಮೆಲ್ಲರ ರಕ್ತ ಕೆಂಪು. ಬೆವರು ಉಪ್ಪು. ಮಾನವೀಯತೆ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭ. ಬಸವಣ್ಣ, ಏಸು ಸೇರಿದಂತೆ ಅನೇಕ ಪೂಜ್ಯರ ಆಶೀರ್ವಾದ ನಮ್ಮ ಸರ್ಕಾರದ ಮೇಲಿದೆವು” ಎಂದರು.

“ಯುವಕರು ಭಾರತ್ ಜೋಡೋ ಸಂಘಗಳನ್ನು ಯುವಕರು ಸದುಪಯೋಗ ಮಾಡಿಕೊಳ್ಳಬೇಕು. ನಾಟಕ, ಕ್ರೀಡೆ ಸೇರಿದಂತೆ ಹಾಗೂ ಇತರೇ ಕಾರ್ಯಗಳನ್ನು ಯುವಕರು ಮಾಡಬೇಕು. ಕ್ರಿಯಾಶೀಲವಾಗಿ ಇದರಲ್ಲಿ ತೊಡಗಿಕೊಳ್ಳಬೇಕು ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular