HomeFeatured Newsಶಿಡ್ಲಘಟ್ಟದಲ್ಲಿ ಸದ್ದು, ಸುದ್ದಿ ಮಾಡಿ ಪರಾರಿಯಾದ ರಾಜೀವ್‌ ಗೌಡ ಯಾರು?

ಶಿಡ್ಲಘಟ್ಟದಲ್ಲಿ ಸದ್ದು, ಸುದ್ದಿ ಮಾಡಿ ಪರಾರಿಯಾದ ರಾಜೀವ್‌ ಗೌಡ ಯಾರು?

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಬಿ.ವಿ.ರಾಜೀವ್‌ ಗೌಡ ಎಸ್ಕೇಪ್ ಆಗಿದ್ದಾರೆ. ತಮ್ಮ ವಿರುದ್ಧ 2 ಎಫ್‌ಐಆರ್‌ ದಾಖಲಾಗುತ್ತಿದ್ದಂತೆಯೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿರುವ ಕಾಂಗ್ರೆಸ್​​ ಮುಖಂಡನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಎರಡು ದಿನದಿಂದ ಸದ್ದು, ಸುದ್ದಿ ಮಾಡುತ್ತಿರುವ ಬಿ.ವಿ.ರಾಜೀವ್‌ ಗೌಡ ಯಾರು? ಎಂದು ಹುಡುಕಿದರೆ ಸಿಗುವುದು ಬಂಡಾಯದ ಕಥೆ. ಪ್ರತಿ ಬಾರಿ ಚುನಾವಣೆ ಬಂದಾಗಲೂ ಶಿಡ್ಲಘಟ್ಟ ಕಾಂಗ್ರೆಸ್ ಬಂಡಾಯದ ಕಾರಣಕ್ಕೆ ಸುದ್ದಿಯಾಗುತ್ತದೆ.

2023ರಲ್ಲಿಯೂ ಶಿಡ್ಲಘಟ್ಟದಲ್ಲಿ ಬಂಡಾಯದ ಬಿಸಿ ಜೋರಾಗಿತ್ತು. ಈಗಾಗಲೇ ಶಿಡ್ಲಘಟ್ಟ ಕಾಂಗ್ರೆಸ್ ರಾಜೀವ್ ಗೌಡ, ಪುಟ್ಟು ಆಂಜಿನಪ್ಪ ಮತ್ತು ವಿ.ಮುನಿಯಪ್ಪ ಎಂಬ ಮೂರು ಬಣಗಳಿಂದಾಗಿ ಸೊರಗಿ ಹೋಗಿದೆ, ಕಾರ್ಯಕರ್ತರು ಬೇಸರಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿ.ವಿ.ರಾಜೀವ್‌ ಗೌಡ ಯಾರು?: ಬಿ.ವಿ.ರಾಜೀವ್‌ ಗೌಡ ಕಾಂಗ್ರೆಸ್ ಮುಖಂಡ. 2023ರ ವಿಧಾನಸಭೆ ಚುನಾವಣೆಯಲ್ಲಿ ಅವರು 36,157 ಮತಗಳನ್ನು ಪಡೆದು 3ನೇ ಸ್ಥಾನ ಪಡೆದು ಸೋಲು ಕಂಡಿದ್ದಾರೆ.

ಹೊಸಕೋಟೆ ಮೂಲದ ಬಿ.ವಿ.ರಾಜೀವ್‌ ಗೌಡ ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಬಂಡಾಯ ಉಂಟು ಮಾಡಿಯೇ ಸುದ್ದಿಯಾದವರು. 2023ರ ಚುನಾವಣೆಯಲ್ಲಿ ರಾಜೀವ್ ಗೌಡ, ಪುಟ್ಟು ಆಂಜಿನಪ್ಪ ನಡುವೆ ಕಾಂಗ್ರೆಸ್‌ ಟಿಕೆಟ್‌ಗಾಗಿ ಪೈಪೋಟಿ ನಡೆದಿತ್ತು.

ಮೊದಲು ಸಮಾಜ ಸೇವಕರಾಗಿದ್ದ ರಾಜೀವ್ ಗೌಡ ಬಳಿಕ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡರು. ಹಾಲಿ ಸಚಿವ ಕೆ.ಎಚ್‌.ಮುನಿಯಪ್ಪ ಮೂಲಕ ಟಿಕೆಟ್‌ಗೆ ಪ್ರಯತ್ನ ಮಾಡಿದರು, ಟಿಕೆಟ್ ಪಡೆಯುವಲ್ಲಿ ಯಶಸ್ವಿಯೂ ಆದರು.

ಇದರಿಂದಾಗಿ ಪುಟ್ಟು ಆಂಜಿನಪ್ಪ ಬಂಡಾಯದ ಬಾವುಟ ಹಾರಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕಿದರು. ಇಬ್ಬರ ಜಗಳದಲ್ಲಿ ಜೆಡಿಎಸ್‌ನ ಬಿ.ಎನ್.ರವಿ ಕುಮಾರ್ 68,932 ಮತಗಳನ್ನು ಪಡೆದು ಜಯಗಳಿಸಿದರು.

ರಾಜೀವ್ ಗೌಡ 36,157 ಮತಗಳನ್ನು ಪಡೆದು 3ನೇ ಸ್ಥಾನ. ಪಕ್ಷೇತರ ಅಭ್ಯರ್ಥಿ ಪುಟ್ಟು ಆಂಜಿನಪ್ಪ 52,160 ಮತಗಳನ್ನು ಪಡೆದು 2ನೇ ಸ್ಥಾನವನ್ನು ಪಡೆದರು. ಸೋತರು ಕ್ಷೇತ್ರವನ್ನು ಬಿಟ್ಟು ಹೋಗುವುದಿಲ್ಲ ಎಂದು ನೀಡಿದ್ದ ಮಾತಿನಂತೆ ರಾಜೀವ್ ಗೌಡ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

ಶಾಸಕರೂ ಅಲ್ಲದ, ಮಾಜಿ ಶಾಸಕರೂ ಅಲ್ಲದ ರಾಜೀವ್ ಗೌಡ ಸರ್ಕಾರಿ ಅಧಿಕಾರಿಗೆ ಅಶ್ಲೀಲ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜೀವ್ ಗೌಡ ವಿರುದ್ಧ ಬಿಜೆಪಿ, ಜೆಡಿಎಸ್ ತೀವ್ರವಾದ ಹೋರಾಟ ಮಾಡುವ ಎಚ್ಚರಿಕೆ ಕೊಟ್ಟಿವೆ.

ರಾಜೀವ್ ಗೌಡ ಬಂಧಿಸಬೇಕು, ಅವರನ್ನು ಪಕ್ಷದಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ರಾಜೀವ್ ಗೌಡ ಬಂಧನಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಎರಡು ತಂಡಗಳನ್ನು ರಚನೆ ಮಾಡಿದ್ದಾರೆ, ಪೊಲೀಸರ ಹುಡುಕಾಟ ಮುಂದುವರೆದಿದೆ.

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ನೀಡಿದ ದೂರಿನ ಅನ್ವಯ ರಾಜೀವ್‌ ಗೌಡ ವಿರುದ್ಧ ಬಿಎನ್‌ಎಸ್‌ ಅಡಿ 132  ಸರ್ಕಾರಿ ಕೆಲಸಕ್ಕೆ ಅಡ್ಡಿ ಹಾಗೂ ಬೆದರಿಕೆ, 351(3) ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ, ಮಹಿಳೆಯ ಚಾರಿತ್ರ್ಯವಧೆ, 56 ಅಪರಾಧಕ್ಕೆ ಪ್ರಚೋದನೆ ಅಥವಾ ಪ್ರೇರಣೆ, 224 ಸರ್ಕಾರಿ ನೌಕರನಿಗೆ ದೈಹಿಕ ಅಥವಾ ಮಾನಸಿಕವಾಗಿ ಗಾಯ ಮಾಡುವ ಬೆದರಿಕೆ, 352 ಶಾಂತಿ ಭಂಗಕ್ಕೆ ಪ್ರಚೋದನೆ ನೀಡುವ ಉದ್ದೇಶದಿಂದ ಅವಮಾನ ಅಡಿ ಕೇಸು ದಾಖಲಾಗಿದೆ.

ಅಲ್ಲದೇ ರಾಜೀವ್‌ ಗೌಡ ವಿರುದ್ಧ ಶಿಡ್ಲಘಟ್ಟ ಜೆಡಿಎಸ್ ತಾಲೂಕು ಅಧ್ಯಕ್ಷ ಶ್ರೀನಿವಾಸಗೌಡ ಅವರು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಒಟ್ಟು ಎರಡು ಎಫ್‌ಐಆರ್‌ ದಾಖಲಾಗಿದೆ. ರಾಜೀವ್ ಗೌಡ ಎಲ್ಲಿದ್ದಾರೆ? ಎಂಬುದು ಸದ್ಯದ ಪ್ರಶ್ನೆಯಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular