ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅಭಿನಯದ ‘ಡಂಕಿ’ ಸಿನಿಮಾ ಬಿಡುಗಡೆಯಾಗಿ ಮೂರು ವರ್ಷಗಳೇ ಕಳೆದಿವೆ. ಹೀಗಾಗಿ ಅವರ ಮುಂಬರುವ ಬಹುನಿರೀಕ್ಷಿತ ‘ಕಿಂಗ್’ ಚಿತ್ರದ ಮೇಲೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಗಳು ಮೂಡಿವೆ. ಇದೀಗ ಈ ಚಿತ್ರತಂಡದಿಂದ ಹೊಸ ಪೋಸ್ಟರ್ ಹೊರಬಿದ್ದಿದ್ದು, ಸಿನಿಮಾದ ಬಿಡುಗಡೆ ದಿನಾಂಕದ ಕುರಿತಾಗಿ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಕೆಲವು ದಿನಗಳಿಂದ ‘ಕಿಂಗ್’ ಸಿನಿಮಾ ಮುಂದೂಡಲ್ಪಡಲಿದೆ ಎಂಬ ವದಂತಿಗಳು ಕೇಳಿಬರುತ್ತಿದ್ದವು. ಆದರೆ ಆ ವದಂತಿಗಳನ್ನು ಅಲ್ಲಗಳೆದಿರುವ ನಿರ್ಮಾಪಕರು, ಸಿನಿಮಾ ನಿಗದಿತ ದಿನಾಂಕದಂದೇ ಅಂದರೆ 2026 ರ ಡಿಸೆಂಬರ್ 24 ರಂದು ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೊಸ ಪೋಸ್ಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಅದೇ ಸಮಯದಲ್ಲಿ ಹಾಲೀವುಡ್ನ ಬೃಹತ್ ಸಿನಿಮಾಗಳಾದ ‘ಅವೇಂಜರ್ಸ್: ಡೂಮ್ಸ್ಡೇ’ ಮತ್ತು ‘ಡ್ಯೂನ್ 3’ ಬಿಡುಗಡೆಯಾಗುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ಕಠಿಣ ಸ್ಪರ್ಧೆ ಎದುರಾಗಲಿದೆ.
ಇನ್ನು ಶಾರುಖ್ ಖಾನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅಂದರೆ ನವೆಂಬರ್ 2 ರಂದು ಸಿನಿಮಾದ ವಿಶೇಷ ಗ್ಲಿಂಪ್ಸ್ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ‘ಪಠಾಣ್’ ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಹಾಗೂ ಮಾರ್ಫ್ಲಿಕ್ಸ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಶಾರುಖ್ ಜೊತೆಗೆ ಅವರ ಪುತ್ರಿ ಸುಹಾನಾ ಖಾನ್, ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ರಾಣಿ ಮುಖರ್ಜಿ, ಜಾಕಿ ಶ್ರಾಫ್ ಮತ್ತು ಅರ್ಷದ್ ವಾರ್ಸಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

